ಚಿಕ್ಕಮಗಳೂರು: ತಾಲ್ಲೂಕು ಆಡಳಿತ ಗೋಮಾಳ ಮತ್ತು ಕಾಫಿ ಖರಾಬು ಹೆಚ್ಚುವರಿ ಜಮೀನನ್ನು ಬಹು ಜಮೀನು ಒತ್ತುವರಿದಾರರಿಂದ ತೆರವುಗೊಳಿಸಿದ್ದು, ಈ ಜಮೀನನ್ನು ಭೂರಹಿತ ದಲಿತರಿಗೆ ಕಾಯ್ದಿರಿಸಿ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ರವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಮನವಿ ನೀಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್.ವೆಂಕಟೇಶ್ ಮನವಿ ನೀಡಿ ಮಾತನಾಡಿ ಎನ್.ಆರ್ ಪುರ ತಾಲ್ಲೂಕಿನ ಕಸಬಾ ಹೋಬಳಿ ಸೂಸಲವಾನಿ ಗ್ರಾಮದ ಸರ್ವೇ ನಂ ೩೨/೨ ರಲ್ಲಿ ಗೋಮಾಳ ಮತ್ತು ಕಾಫಿ ಖರಾಬು ಹೆಚ್ಚುವರಿ ಜಮೀನನ್ನು ಬಹು ಜಮೀನು ಒತ್ತುವರಿದಾರರಿಂದ ತೆರವುಗೊಳಿಸಿದ್ದು, ಈ ಜಮೀನುನ ಭೂರಹಿತ ದಲಿತರಿಗೆ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದರು.

ಇದೇ ಸರ್ವೆ ನಂಬರ್‌ನಲ್ಲಿ ೨೦-೦.೮ ಎಕರೆ ಸರ್ಕಾರಿ ಜಮೀನನ್ನು ಭೂಮಾಲೀಕರು ಅತಿಕ್ರಮವಾಗಿ ಸರ್ಕಾರಿ ಕಂದಾಯ ಭೂಮಿಯನ್ನು ಹೊಂದಿರುವ ಬಗ್ಗೆ ಪರಿಶೀಲಿಸಿದ ತಾಲೂಕು ಆಡಳಿತ ತೆರವುಗೊಳಿಸಿದ್ದು, ಇದೇ ಭೂಮಿಯನ್ನು ಬಡ ಭೂರಹಿತ ದಲಿತರಿಗೆ ಕೃಷಿ ಸಾಗುವಳಿಗಾಗಿ ಮತ್ತು ನಿವೇಶನಕ್ಕಾಗಿ ಕಾಯ್ದಿರಿಸಿ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಎನ್.ಆರ್ ಪುರ ತಾಲೂಕಿನಾದ್ಯಂತ ಇಂತಹ ಭೂಕಬಳಿಕೆಯ ಸಮಸ್ಯೆಗಳಿದ್ದು, ಉಳ್ಳವರು ಭೂಕಬಳಿಕೆ ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಾದ ತಾವು ತಾಲೂಕು ದಂಡಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ತ್ವರಿತವಾಗಿ ಸ್ಥಳ ಪರಿಶೀಲಿಸಿ ಸರ್ವೆ ಮಾಡಿಸಿ ದಲಿತರಿಗೆ ಭೂಮಂಜೂರಾತಿ ನೀಡಬೇಕೆಂದು ಮನವಿ ಮಾಡಿದ್ದಾರೆ.

ವಿಳಂಭವಾದರೆ ನಮ್ಮ ಸಂಘಟನೆಯಿಂದ ಭೂರಹಿತ ದಲಿತರಿಗೆ ಭೂಮಿ ನೀಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕರಾದ ಎಂ.ವಿ ಭವಾನಿ, ಜಿಲ್ಲಾ ಸಂಘಟನಾ ಸಂಚಾಲಕರುಗಳಾದ ರಾಜೇಶ್, ಮೃತ್ಯುಂಜಯ, ಅಬ್ದುಲ್ ರೆಹಮನ್, ತಾಲೂಕು ಸಂಘಟನಾ ಸಂಚಾಲಕ ಬಿ.ಆರ್ ಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.

Appeal to District Collector to grant landless Dalits