ಚಿಕ್ಕಮಗಳೂರು: ನಗರದ ಪ್ರಮುಖ ರಸ್ತೆಗಳಲ್ಲಿರುವ ಗುಂಡಿ-ಗೊಟರುಗಳಿಗೆ ಮುಚ್ಚಿಸಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಬಹುಜನ ಸಮಾಜ ಪಕ್ಷದ ಮುಖಂಡರುಗಳು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಈ ಕುರಿತು ಮಾತನಾಡಿದ ಬಿಎಸ್‌ಪಿ ತಾಲ್ಲೂಕು ಅಧ್ಯಕ್ಷ ಹೆಚ್.ಕುಮಾರ್ ನಗರದ ಎಂ.ಜಿ.ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಹಾಗೂ ಹಿರೇಮಗಳೂರು ಬೈಪಾಸ್ ಸಂಪರ್ಕ ಕಲ್ಪಿಸುವ ದೀಪ ನರ್ಸಿಂಗ್ ಹೋಂ ಎದುರಿನ ರಸ್ತೆಗಳಲ್ಲಿ ತೀವ್ರ ಗುಂಡಿಗಳಾಗಿರುವ ಪರಿಣಾಮ ದುರಸ್ಥಿಗೊಳಿಸಬೇಕು ಎಂದರು.

ಪ್ರತಿನಿತ್ಯ ಈ ರಸ್ತೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ವಾಹನ ಸಂಚರಿಸುತ್ತಿವೆ. ಇಂಥ ರಸ್ತೆಗಳನ್ನು ಅಚ್ಚುಕಟ್ಟಾಗಿ ಪೂರೈಸುವುದು ನಗರಸಭೆ ಆದ್ಯ ಕರ್ತವ್ಯವಾಗಿದೆ. ಹೀಗಾಗಿ ಸವಾರರಿಗೆ ಹಾಗೂ ಪಾದಚಾರಿ ಗಳ ರಕ್ಷಣೆಯ ದೃಷ್ಟಿಯಿಂದ ರಸ್ತೆಗಳ ಗುಂಡಿ ಮುಚ್ಚಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.

ಪ್ರಮುಖ ರಸ್ತೆಗಳಲ್ಲಿ ಅತಿಹೆಚ್ಚು ವಾಹನ ದಟ್ಟಣೆಯಿಂದ ದ್ವಿಚಕ್ರ ವಾಹನಗಳು ಗುಂಡಿ ತಪ್ಪಿಸಲು ಸಲು ವಾಗಿ ಪಾದಚಾರಿಗಳಿಗೆ ಅಥವಾ ಬೇರ್‍ಯಾವ ವಾಹನಗಳ ಮೇಲೆ ಅಪಘಾತಗಳು ಸಾಮಾನ್ಯವಾಗಿದೆ. ಗುಂಡಿ ಮುಚ್ಚಿಸಲು ಲಕ್ಷಗಟ್ಟಲೇ ಹಣವ್ಯಯಿಸುವ ಅಗತ್ಯತೆ ಇಲ್ಲದಿರುವ ಕಾರಣ ಕಡಿಮೆ ಖರ್ಚಿನಲ್ಲಿ ಗುಂಡಿಗಳನ್ನು ಮುಚ್ಚಿಸಬೇಕೆಂದು ಹೇಳಿದರು.

ಹೀಗಾಗಿ ನಗರಸಭೆ ಕಾಲಾಹರಣ ಮಾಡುವ ಬದಲು ಎಚ್ಚೆತ್ತುಕೊಂಡು ನಗರದ ಪ್ರಮುಖ ರಸ್ತೆಗಳ ಗುಂಡಿಗಳನ್ನು ಮುಚ್ಚಿಸಿ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ, ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಉಪಾಧ್ಯಕ್ಷರಾದ ಸಿದ್ದಯ್ಯ, ಹೊನ್ನಪ್ಪ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಯೋಜಕ ಗಂಗಾಧರ್, ಪ್ರಧಾನ ಕಾರ್ಯದರ್ಶಿ ಆರ್.ವಸಂತ್ ಹಾಜರಿದ್ದರು.

BSP demands closure of potholes on major roads of the city