ಚಿಕ್ಕಮಗಳೂರು: ಹವಾಮಾನ ವೈಪರೀತ್ಯ, ಜತೆಗೆ ಅತಿವೃಷ್ಟಿ ಪರಿಣಾಮದಿಂದಾಗಿ ಕಳೆದ ಏಳೆಂಟು ವರ್ಷಗಳಿಂದ ಜಿಲ್ಲೆಯ ಕಾಫಿ ಉದ್ಯಮ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಇವುಗಳನ್ನು ಪ್ರಧಾನ ಮಂತ್ರಿಯವರಿಗೆ ಮನವರಿಕೆ ಮಾಡಲು ಕಾಫಿ ಮಂಡಳಿ ನಿಯೋಗಕ್ಕೆ ಭೇಟಿಗೆ ಅವಕಾಶ ಕಲ್ಪಿಸಿಕೊಡುವಂತೆ ಕಾಫಿ ಮಂಡಳಿ ಮಾಜಿ ಅಧ್ಯಕ್ಷ ಡಿ.ಎಮ್. ವಿಜಯ್ ಒತ್ತಾಯಿಸಿದರು.

ಕಳೆದ ಏಳೆಂಟು ವರ್ಷಗಳಿಂದ ಜಿಲ್ಲೆಯ ಭಾಗದಲ್ಲಿ ಅಕಾಲಿಕ ಮಳೆ, ಹವಾಮಾನ ವೈಪರೀತ್ಯದಿಂದಾಗಿ ಕಾಫಿ ಉದ್ಯಮ ನೆಲಕಚ್ಚಿದೆ. ನಿರೀಕ್ಷಿತ ಫಸಲು ಬಾರದೆ ಬೆಳೆಹಾನಿ, ಬೆಲೆಯ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಬೆಳೆಗಾರರು ಎದುರಿಸುತ್ತಿದ್ದಾರೆ, ಜನಪ್ರತಿನಿಧಿಗಳು, ಸರ್ಕಾರ ಸಕಾಲಕ್ಕೆ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಇತ್ತೀಚಿಗೆ ಜಿಲ್ಲೆಯಾದ್ಯಂತ ಸುರಿದ ಅಕಾಲಿಕ ಮಳೆಗೆ ಕಾಫಿ ಫಸಲು ಹಾಳಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಬೆಳೆ  ನಷ್ಟವಾಗಿದೆ ಈ ಬಗ್ಗೆ ಜಿಲ್ಲಾಡಳಿತ ಸಮಗ್ರವಾಗಿ ಸಮೀಕ್ಷೆ ನಡೆದ ಸ್ಪಷ್ಟ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಪೆಟ್ರೋಲಿಯಂ ಉತ್ಪನ್ನ, ರಸಗೊಬ್ಬರದ ಬೆಲೆ ದುಪ್ಪಟ್ಟಾಗಿದ್ದು ಬೆಳೆಗಾರರು ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿ ನರಳುತ್ತಿದ್ದಾರೆ ಸರ್ಕಾರ ಕೂಡಲೇ ನೆರವಿಗೆ  ಧಾವಿಸಬೇಕು ಎಂದು ಆಗ್ರಹಿಸಿದರು.

ಆಲ್ದೂರು ಕಾಫಿ ಮಂಡಳಿ ಅಧ್ಯಕ್ಷ ಸುರೇಶ್ ಮಾತನಾಡಿ ಕಾಫಿ ಉದ್ಯಮವು ಸಾವಿರಾರು ಮಂದಿಗೆ ಉದ್ಯೋಗವಕಾಶ ಕಲ್ಪಿಸಿದೆ. ಇದರಿಂದಾಗಿ ಸಾವಿರಾರು ಕೋಟಿ ಜಿಎಸ್‌ಟಿ ತೆರಿಗೆ ಸಂಗ್ರಹ ಮಾಡಲಾಗುತ್ತದೆ. ೨೦೧೪ ರ ನಂತರ ಕಾಫಿ ಮಂಡಳಿಯಿಂದ ಯಾವುದೇ ಸಹಾಯ ಧನ ಸಿಕ್ಕಿಲ್ಲ, ರೀಪ್ಲಾಂಟ್ ಸ್ಕೀಮ್ ಸಹ ಜಾರಿಗೊಳಿಸಿಲ್ಲ ಇದರಿಂದಾಗಿ ರಫ್ತು ವಲಯಕ್ಕೆ ದೊಡ್ಡ ಹೊಡೆತ ಬಿದ್ದಿದೆ, ಕಾಫಿ ಮಂಡಳಿ ನಿಷ್ಟಿçಯವಾಗಿದೆ. ದೇಶದ ಹಿತಾಸಕ್ತಿ ಹಾಗೂ ಉದ್ಯೋಗ ಅವಕಾಶದ ದೃಷ್ಟಿಯಿಂದ ಸರ್ಕಾರ ಬೆಳೆಗಾರರ ನೆರವಿಗೆ ಬರಬೇಕು, ಕಾಫಿ ಮಂಡಳಿಯಿಂದ ಸಬ್ಸಿಡಿ ಜತೆಗೆ ಬ್ಯಾಂಕ್‌ಗಳಲ್ಲಿ ಬಡ್ಡಿ ರಹಿತ ಸಾಲ ವಿತರಣೆಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಬೆಲೆ ಹೆಚ್ಚಾಗಿದೆ, ಆದರೆ ಹವಮಾನ ವೈಪರೀತ್ಯದಿಂದಾಗಿ ಬೆಳೆಯ ಪ್ರಮಾಣ ಕಡಿಮೆಯಾಗಿದೆ, ಮತ್ತೊಂದೆಡೆ ಕಾಫಿ ತೋಟಗಳಿಗೆ ಸಿಂಪಡಿಸುವ ಔಷಧಿಗಳು, ರಸಗೊಬ್ಬರ, ಯಂತ್ರೋಪಕರಣಗಳ ಬೆಲೆ ಹೆಚ್ಚಾಗಿದ್ದು ಬೆಳೆಗಾರರಿಗೆ ದೊಡ್ಡ ಪೆಟ್ಟು ನೀಡಿದೆ, ಇವೆಲ್ಲ ಅಂಶಗಳನ್ನು ಪ್ರಧಾನ ಮಂತ್ರಿಗಳಿಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಕಾಫಿ ಬೆಳೆಗಾರರ ನಿಯೋಗಕ್ಕೆ ಭೇಟಿ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕಾಫಿ ಬೆಳೆಗಾರರಾದ ಪುಟ್ಟೇಗೌಡ, ರಘು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Crop damage relief: ಬೆಳೆ ಹಾನಿ ನಷ್ಟಕ್ಕೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಜಿಲ್ಲಾ ಕಾಂಗ್ರೆಸ್ ಆಗ್ರಹ