ಬಳ್ಳಾರಿ: ಕಾಂಗ್ರೆಸ್ (Congress) ನವರಿಗೆ ಕುಂಕುಮ, ಕೇಸರಿ ಕಂಡರೆ ಆಗಲ್ಲ. ಏಕೆಂದರೆ ಅದು ಮತಾಂತರಕ್ಕೆ ಕುಮ್ಮಕ್ಕು ನೀಡುವ ಪಕ್ಷ. ಅಂತಹವರಿಗೆ ಮತ ಹಾಕಬೇಡಿ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಕರೆ ನೀಡಿದ್ದಾರೆ.

ರಾಮ ಕಾಲ್ಪನಿಕ ವ್ಯಕ್ತಿ ಎಂದಿತ್ತು ಕಾಂಗ್ರೆಸ್. ರಾಮ ಇಲ್ಲ ಅಂದ್ರೆ ರಾಮಾಯಣ ಇಲ್ಲ, ಆಂಜಯನೇಯ ಇಲ್ಲ. ತಳಬುಡ ಇಲ್ಲದೆ ಪ್ರಶ್ನೆ ಮಾಡೋದು ಕಾಂಗ್ರೆಸ್‌ನ ಸಂಸ್ಕಾರ. ವೀರ ಮದಕರಿಯನ್ನು ಕೊಂದದ್ದು ಕಾಂಗ್ರೆಸ್ ಪೂಜಿಸುವ ಟಿಪ್ಪುವಿನ ಅಪ್ಪ.

ಗಣಿ ನಾಡು ಬಳ್ಳಾರಿಯಲ್ಲಿಂದು (Ballari) ನಡೆದ ಬಿಜೆಪಿಯ ಎಸ್ಟಿ ನವಶಕ್ತಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಶಿವನ ಆವಾಸ ಸ್ಥಾನವಾದ ಕಪಾಲಿ ಬೆಟ್ಟವನ್ನು ಕೆಪಿಸಿಸಿ (KPCC) ಅಧ್ಯಕ್ಷರು ಕ್ರಿಸ್ತನ ಬೆಟ್ಟ ಮಾಡಲು ಹೊರಟರು. ಇದರ ಪರಿಣಾಮ ಅವರಿಗೆ ಉನ್ನತ ಹುದ್ದೆ ಸಿಕ್ಕಿತು. ಕಾಂಗ್ರೆಸ್ ನವರಿಗೆ ಕುಂಕುಮ, ಕೇಸರಿ ಕಂಡರೆ ಆಗಲ್ಲ. ಅಂಥವರಿಗೆ ಮತ ಹಾಕಬೇಡಿ ಎಂದು ಹೇಳಿದ್ದಾರೆ.

ನಮ್ಮ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಕಾಯ್ದೆ ವಾಪಾಸ್ ಪಡೆಯುತ್ತೇವೆ ಎಂದು ಹೇಳುತ್ತಾರೆ. ಮತಾಂತರಕ್ಕೆ ಕುಮ್ಮಕ್ಕು ನೀಡುವ ಪಕ್ಷ ಕಾಂಗ್ರೆಸ್. ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದು ಕಾಂಗ್ರೆಸ್. ಹನುಮಂತನ ಅಸ್ತಿತ್ವವನ್ನೂ ಪ್ರಶ್ನಿಸಿತು. ರಾಮಾಯಣವನ್ನೇ ಕಾಲ್ಪನಿಕ ಎಂದು ಹೇಳಿತು. ಮತ್ತೊಬ್ಬ ಹಿಂದೂ ಎಂದರೆ ಕೆಟ್ಟ ಶಬ್ದ ಎಂದು ಹೇಳ್ತಾನೆ. ವಿಜಯನಗರ ಸಾಮ್ರಾಜ್ಯ ಸ್ಥಾಪಿಸುವಲ್ಲಿ ನಾಯಕ ಸಮುದಾಯದ ಪಾತ್ರ ದೊಡ್ಡದಿದೆ. ಕಾಂಗ್ರೆಸ್ ಇಂದು ಗಂಡುಗಲಿ ಕುಮಾರರಾಮ, ಮದಕರಿ ನಾಯಕನ ವಿರುದ್ಧ ನಿಂತಿದೆ. ಮದಕರಿ ನಾಯಕನನ್ನು ಮೋಸದಿಂದ ಕೊಂದ ಟಿಪ್ಪುವಿನ (Tipu Sultan) ಪರ ಕಾಂಗ್ರೆಸ್ ಇದೆ. ಇಂತಹವರಿಗೆ ಮತ ಹಾಕಬೇಕೆ ಎಂದು ಯೋಚಿಸುವಂತೆ ಸಲಹೆ ನೀಡಿದ್ದಾರೆ.

ಕಾಂಗ್ರೆಸ್ನವರಿಗೆ ಕೇಸರಿ, ಕುಂಕುಮ ಕಂಡರೆ ಆಗಲ್ಲ. ಹಿಂದೂ ಶಬ್ದ ಕೇಳಿದರೆ ಆಗಲ್ಲ. ಇಂತಹ ಪಕ್ಷಕ್ಕೆ ಉತ್ತರ ಪ್ರದೇಶದಲ್ಲಿ ಠೇವಣಿ ಕಳೆದುಕೊಳ್ಳುವಂತೆ ಅಲ್ಲಿನ ಜನ ಉತ್ತರ ನೀಡಿದ್ದಾರೆ. ರಾಮನ ಜೊತೆಗೆ ಹನುಮ ಇದ್ದಂತೆ ಉತ್ತರ ಪ್ರದೇಶದ ರಾಮ ಕರ್ನಾಟಕದ ಹನುಮ ಜೊತೆ ಇರಬೇಕು. ಅಲ್ಲಿ ಬಿಜೆಪಿ ಸರ್ಕಾರ ಇರುವಂತೆ ಬರುವ ದಿನಗಳಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಳ್ಳುವಂತೆ ಮಾಡಿ ಬಿಜೆಪಿಗೆ ಅಧಿಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ರಾಹುಲ್ ಗಾಂಧಿಯದ್ದು ಐರನ್ ಲೆಗ್: ರಾಹುಲ್ ಗಾಂಧಿ (Rahul Gandhi) ಯಾತ್ರೆ ಮಾಡಿದ ಪರಿಣಾಮ ಕರ್ನಾಟಕದ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಗೆದ್ದಿದೆ. ರಾಹುಲ್ ಹೋದೆಡೆ ಕಾಂಗ್ರೆಸ್ ಧೂಳಿಪಟವಾಗಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಅವರದು ಐರನ್ ಲೆಗ್ ಎಂದು ಲೇವಡಿ ಮಾಡಿದ್ರು.

Congress encourages conversions