ಕಡೂರು: ರಾಜ್ಯದಲ್ಲಿ ನಾವು ನುಡಿದಂತೆ ನಡೆದಿದ್ದೇವೆ ನಮಗೆ ಶಕ್ತಿ ತುಂಬಿ ನಿಮ್ಮ ಮತ್ತು ನಿಮ್ಮ ಕ್ಷೇತ್ರದ ಅಭಿವೃದ್ಧಿ ನೀವೇ ಮುಂದಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ಅವರು ಕಡೂರಿನೊಂದಿಗೆ ತಮಗೆ ಅವಿನಾಭಾವ ಸಂಬಂಧವಿದೆ ಇದುವರೆಗೂ ತಮ್ಮ ಮಾತಿಗೆ ಬೆಲೆನೀಡಿ ಆಶೀರ್ವಾದ ಮಾಡಿದ್ದೀರಿ, ಈ ಬಾರಿಯೂ ಶ್ರೇಯಸ್ ಪಟೇಲ್ ಅವರನ್ನು ಆಶೀರ್ವಾದ ಮಾಡುವಿರಿ ಎಂಬ ನಂಬಿಕೆ ಇದೆ ಎಂದರು.

ರಾಜ್ಯದ ೨೨೩ ತಾಲೂಕು ಬರಪೀಡಿತ ಎಂದು ಘೋಷಣೆ ಮಾಡಿದೆ. ಕೇಂದ್ರ ಸರ್ಕಾರಕ್ಕೆ ಎನ್ ಡಿ ಆರ್ ಎಫ್ ನಿಂದ ಪರಿಹಾರ ನೀಡುವಂತೆ ಮನವಿ ಮಾಡಿ ಏಳು ತಿಂಗಳು ಕಳೆದರೂ ಯಾವುದೇ ಪರಿಹಾರ ಬರದ ಕಾರಣ ನ್ಯಾಯಾಲಯದ ಮೊರೆ ಹೋಗಬೇಕಾಗಿ ಬಂದಿತ್ತು ಈಗ ನ್ಯಾಯಾಲಯ ಒಂದು ವಾರದೊಳಗೆ ಪರಿಹರಿಸುವಂತೆ ಸೂಚನೆ ನೀಡಿದೆ ಎಂದರು

ನರೇಂದ್ರ ಮೋದಿಯವರು ಕರ್ನಾಟಕವನ್ನು ಮಲತಾಯಿ ಮಗನಂತೆ ನೋಡುತ್ತಿದೆ, ತೆರಿಗೆ ಹಣದಲ್ಲಿ ವಂಚನೆ ಮಾಡುತ್ತಿದ್ದಾರೆ, ಹಣಕಾಸು ಮಂತ್ರಿ ರಾಜ್ಯಕ್ಕೆ ಬಂದು ಸುಳ್ಳು ಹೇಳಿ ಹೋಗಿದ್ದಾರೆ, ಚರ್ಚೆಗೂ ಬರಲಿಲ್ಲ, ಹಣವೂ ಬರಲಿಲ್ಲ, ಬಿಜೆಪಿಯವರ ಮನೆದೇವರೇ ಸುಳ್ಳು, ಹತ್ತು ವರ್ಷಗಳ ನಂತರವೂ ೨೦೧೪ ರಲ್ಲಿ ನೀಡಿದ ಭರವಸೆಯನ್ನು ಈಡೇರಿಸಲಿಲ್ಲ, ರೈತರ ಆದಾಯ ದುಪ್ಪಟ್ಟಾಗಿಲ್ಲ, ಉದ್ಯೋಗ ಇಲ್ಲ, ೧೫ ಲಕ್ಷವಿಲ್ಲ, ರೈತರ ಸಾಲ ಮನ್ನಾ ಮಾಡಿಲ್ಲ ಇಷ್ಟೆಲ್ಲಾ ಇಲ್ಲಗಳಿದ್ದರೂ ಯುವಕರು ಮೋದಿ ಜಪ ಮಾಡುವಂತೆ ಭಾವನಾತ್ಮಕ ಭಾಷಣ ಮಾಡಿ ಮೋಡಿ ಮಾಡುತ್ತಿದ್ದಾರೆ ಎಂದರು.

ಶಾಸಕ ಕೆ.ಎಸ್.ಆನಂದ್ ಮಾತನಾಡಿ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತಿಗೆ ಬೆಲೆ ನೀಡಿ ತಮ್ಮನ್ನು ಗೆಲಿಸಿದ್ದೀರಿ, ಇಂದು ಅವರ ಮನವಿಯನ್ನು ಪುರಸ್ಕರಿಸಿ ಶ್ರೇಯಸ್ ಪಟೇಲ್ ಅವರನ್ನು ಬೆಂಬಲಿಸಿ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ, ಮುಂದೆಯೂ ನಡೆಯಲಿದೆ.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ಪ್ರಣಾಳಿಕೆಯಲ್ಲಿ ನೀಡಿರುವಂತೆ ೨೫ ಗ್ಯಾರಂಟಿ ಗಳನ್ನು ನೀಡಲಿದೆ. ದೇಶದ ರೈತರ ಸಾಲ ಮನ್ನಾ, ಬಡ ಕುಟುಂಬಕ್ಕೆ ವರ್ಷಕ್ಕೆ ಒಂದು ಲಕ್ಷ, ಯುವಕರಿಗೆ ಉದ್ಯೋಗ, ಕಾರ್ಮಿಕರಿಗೆ ನ್ಯಾಯ ಈರೀತಿ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಂಸದ ಪ್ರಜ್ವಲ್ ಕಡೂರು ಕ್ಷೇತ್ರವನ್ನು ಮತ ಪಡೆಯಲು ಮಾತ್ರ ಉಳಿಸಿಕೊಂಡಿದ್ದಾರೆ. ಶ್ರೇಯಸ್ ಪಟೇಲ್ ಜಯಗಳಿಸಿದರೆ ನಮ್ಮ ಕ್ಷೇತ್ರದಲ್ಲಿ ಸಕ್ರಿಯವಾಗಿ ಇದ್ದು ಅಭಿವೃದ್ಧಿ ಮಾಡುವಂತೆ ತಾವು ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭದ್ರಾ ಉಪ ಕಣಿವೆ ಯೋಜನೆಗೆ ಮರು ಚಾಲನೆ ನೀಡಿದ್ದಾರೆ ಇದರಿಂದ ನಮ್ಮ ಭಾಗದ ಕೆರೆಗಳಿಗೆ ನೀರು ತುಂಬಲಿದೆ. ರೈತರ ಕನಸು ನನಸಾಗಲಿದೆ. ಕಡೂರು ವಿಧಾನಸಭಾ ಕ್ಷೇತ್ರಕ್ಕೆ ೨೮೦ ಕೋಟಿ ನೀಡಿದ್ದಾರೆ. ಜವಳಿ ಪಾರ್ಕ್ ಗೆ ಜಾಗ ನೀಡಿದ್ದಾರೆ ಇದರಿಂದ ಯುವಕರಿಗೆ ಉದ್ಯೋಗ ಸಿಗಲಿದೆ ಎಂದರು.

ಅನೇಕ ಯುವಕರು ಮತ್ತು ಹಿರಿಯ ನಾಯಕರುಗಳು ಹಲವು ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿದರು. ವಿಧಾನಪರಿಷತ್ ಮಾಜಿ ಸಭಾಪತಿ ಬಿ. ಎಲ್. ಶಂಕರ್, ಆಯನೂರು ಮಂಜುನಾಥ್, ಚಿಕ್ಕಮಗಳೂರು ಜಿಲ್ಲೆ ಕಾಂಗ್ರೆಸ್ ಅಧ್ಯಕ್ಷ ಅಂಶುಮಂತ್, ಅರಸೀಕೆರೆ ಶಾಸಕ ಶಿವಲಿಂಗೇಗೌಡ ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್, ಗಾಯಿತ್ರಿ ಶಾತೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ಬೀರೂರು ದೇವರಾಜ್, ಬಂಢಾರಿ ಶ್ರೀನಿವಾಸ್, ಪಿ.ಎ.ರಾಜಪ್ಪ, ಈರಳ್ಳಿ ರಮೇಶ್, ಮೋಹನ್ ಕುಮಾರ್, ಕಡೂರು ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಮೌಳಿ, ಆಸ್ತ ಕಲ್ಲೇಶ್, ಕಂಸಾಗರ ಸೋಮಶೇಖರ್, ಕಾಂಗ್ರೆಸ್ ನ ಮಹಿಳಾ ಘಟಕ ಮತ್ತು ವಿವಿಧ ಘಟಕಗಳ ಪದಾಧಿಕಾರಿಗಳ ಇದ್ದರು.

Congress party candidate Shreyas Patel’s campaign meeting at APMC premises in Kadur town