ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗದಲ್ಲಿ ಸತತ ಮಳೆಯ ಕಾರಣ ಕಾಫಿ, ಮೆಣಸು, ಅಡಕೆ ಸೇರಿದಂತೆ ಅನೇಕ ಫಸಲುಗಳು ಹಾನಿಯಾಗಿದ್ದು ಸರ್ಕಾರ ಬೆಳೆ ನಷ್ಟಕ್ಕೆ ಹೆಕ್ಟೇರ್‌ಗೆ ೨ ಲಕ್ಷ ರೂ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದುಗ್ಗಪ್ಪಗೌಡ ಒತ್ತಾಯಿಸಿದರು.

ಮಲೆನಾಡು ಭಾಗದ ಮೂಡಿಗೆರೆ, ಶೃಂಗೇರಿ, ಒಳಗೊಂಡತೆ ಎಲ್ಲಾ ತಾಲ್ಲೂಕುಗಳನ್ನು ಸುರಿದ ವಿಪರೀತ ಮಳೆಗೆ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಮಲೆನಾಡಿನಲ್ಲಿ ಅರೇಬಿಕಾ ಕಾಫಿ ಹಣ್ಣುಗಳು ಕೊಳೆತು ಎಲೆ ಉದುರಿ ಶೇ ೮೦ ರಷ್ಟು ಫಸಲು ನಷ್ಟವಾಗಿದೆ, ತೇವಾಂಶ ಹೆಚ್ಚಳದಿಂದಾಗಿ ಕಾಳುಮೆಣಸು, ಹಾನಿಯಾಗಿದೆ, ಅಲ್ಲದೇ ಅಡಕೆ ಬೆಳೆಗೆ ಕೊಳೆರೋಗಕ್ಕೆ ತುತ್ತಾಗಿದೆ, ಅಷ್ಟೇ ಅಲ್ಲದೇ ಬಯಲು ಸೀಮೆ ಭಾಗದಲ್ಲಿ ಈರುಳ್ಳಿ, ಆಲೂಗಡ್ಡೆ, ಮೆಕ್ಕೆಜೋಳ ನಾಶವಾಗಿದ್ದು ಸುಮಾರು ೪ ಸಾವಿರ ಕೋಟಿಗೂ ಅಧಿಕ ಮೌಲ್ಯದ ಫಸಲು ಹಾನಿಯಾಗಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಕಾಲಿಕವಾಗಿ ಮಳೆ ಸುರಿದ ಪರಿಣಾಮ ಅರೇಬಿಕಾ ಕಾಫಿ ಹಣ್ಣು ಫಸಲಿಗೆ ಬಂದಿದ್ದು ಕೊಯ್ಲ ಮಾಡಲಾಗದ ಸ್ಥಿತಿ ಉಂಟಾಗಿ ಹಣ್ಣುಗಳು ಮಣ್ಣಿನಲ್ಲಿ ಕೊಳೆತು ಹೋಗುತ್ತಿವೆ. ಮತ್ತೊಂದೆಡೆ ಕೊಯ್ಲು ಮಾಡಿದ ಕಾಫಿ, ಅಡಕೆಯನ್ನು ಒಣಗಿಸಲು ಪರಿತಪಿಸಬೇಕಿದೆ ಇದರಿಂದಾಗಿ ರೈತರು, ಬೆಳೆಗಾರರು ಕಂಗಾಲಾಗಿದ್ದಾರೆ ಎಂದು ಸಮಸ್ಯೆಯನ್ನು ವ್ಯಕ್ತಪಡಿಸಿದರು.

ದೇಶದಲ್ಲಿ ಮಾರಕ ಕೃಷಿ ಕಾಯ್ದೆಗಳ ನಡುವೆ, ಕೃಷಿ ಯಂತ್ರೋಪಕರಣ, ರಸಗೊಬ್ಬರದ ಬೆಲೆ ದುಪ್ಪಟ್ಟಾಗಿದೆ. ಕಾರ್ಮಿಕರ ಕೊರತೆ, ದರ ಇಳಿಕೆ ಸಮಸ್ಯೆಯಿಂದಾಗಿ ರೈತರ ಬದುಕು ಡೋಲಾಯಮಾನವಾಗಿದೆ, ಪ್ರಾಕೃತಿಕ ವಿಕೋಪ, ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಬೆಳೆ ನಷ್ಟ ಅನುಭವಿಸುತ್ತಿದ್ದು ಜಿಲ್ಲಾಡಳಿತ ಬೆಳೆ ಹಾನಿಯ ಸಮೀಕ್ಷೆ ನಡೆಸಿ ನಷ್ಟದ ಕುರಿತು ಸರ್ಕಾರಕ್ಕೆ ವಾಸ್ತವ ವರದಿ ಸಲ್ಲಿಸುವಂತೆ ಒತ್ತಾಯಿಸಿದರು.

ಬೆಳೆಗಾಗಿ ಬ್ಯಾಂಕ್ ಸಾಲ ಮಾಡಿರುವ ಕೃಷಿಕ ಬೆಳೆಹಾನಿಯಿಂದಾಗಿ ಸಾಲದ ಸುಳಿಯಲ್ಲಿ ಸಿಲುಕಿ ಮತ್ತಷ್ಟು ಕಣ್ಣೀರು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು ಸಮಸ್ಯೆಗಳಿಗೆ ಸ್ಪಂದಿಸದೆ ಕಣ್ಣುಮುಚ್ಚಿ ನಿರ್ಲಕ್ಷತನ ತೋರುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ದೂಷಿಸಿದರು. ಬೆಳೆಹಾನಿಯ ಬಗ್ಗೆ ಸಮೀಕ್ಷೆ ನಡೆಸಬೇಕು, ಸರ್ಕಾರ ಬೆಳೆ ನಷ್ಟಕ್ಕೆ ಪ್ರತಿ ಹೆಕ್ಟೇರ್‌ಗೆ ೨ ಲಕ್ಷ ರೂ ಪರಿಹಾರ ನೀಡಬೇಕು ಸೆರ್ಫಾಸಿ ಕಾಯ್ದೆಯ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವೃಷಭರಾಜ್, ರಾಜ್ಯ ಉಪಾಧ್ಯಕ್ಷ ಮಹೇಶ್, ಕಡೂರು ತಾಲ್ಲೂಕು ಅಧ್ಯಕ್ಷ ನಿರಂಜನ್‌ಮೂರ್ತಿ, ಮೂಡಿಗೆರೆ ಅಧ್ಯಕ್ಷ ವಸಂತ್ ಹೆಗ್ಡೆ, ತರೀಕೆರೆ ಅಧ್ಯಕ್ಷ ಓಂಕಾರಪ್ಪ, ಮಂಜೇಗೌಡ, ಬಸವರಾಜಪ್ಪ ಸೇರಿದಂತೆ ಮತ್ತಿತರರು ಇದ್ದರು.

 

Crop damage: ಬೆಳೆ ಹಾನಿ: ಪರಿಹಾರಕ್ಕೆ ಆವತಿ ಕಾಫಿ ಬೆಳೆಗಾರರ ಸಂಘ ಆಗ್ರಹ