ಚಿಕ್ಕಮಗಳೂರು:  ದೇಶದ ಇತ್ತೀಚಿನ ವಿದ್ಯಾಮಾನಗಳನ್ನು ನೋಡಿದರೆ ಈ ಲೋಕಸಭಾ ಚುನಾವಣೆ ಸಾಮಾನ್ಯ ಚುನಾವಣೆಯಾಗಿ ಕಾಣುತ್ತಿಲ್ಲ. ಬದಲಾಗಿ ಭಾರತದ ಭವಿಷ್ಯ ಬರೆಯುವ ಚುನಾವಣೆಯಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಯುವ ಮೋರ್ಚಾ ನಗರ ಮಂಡಲ ಏರ್ಪಡಿಸಿದ್ದ ನಮೋ ಯುವ ಚೌಪಾಲ್ ೪೦೦ ಕುರಿತು ಚರ್ಚೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಚುನಾವಣಾ ಪ್ರಚಾರ ಭಾಷಣ ಮಾಡಿದರು.

ಏ.೨೬ ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ರಾಜ್ಯ ನಾಯಕರು, ಜಿಲ್ಲಾ ಮುಖಂಡರು ಹಾಗೂ ನಿಮ್ಮೆಲ್ಲರ ಆಶಯದಂತೆ ಏ.೩ ರಂದು ನಾಮಪತ್ರ ಸಲ್ಲಿಸಲು ತೀರ್ಮಾನಿಸಲಾಗಿದ್ದು, ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ, ಆಶೀರ್ವಾದ ಬಿಜೆಪಿ ಪಕ್ಷದ ಮೇಲೆ ಮತ್ತು ನನ್ನ ಮೇಲೆ ಇರಲಿ ಎಂದು ವಿನಂತಿಸಿದರು.

ಬಿಜೆಪಿಯನ್ನು ಏಕೆ ಕಟ್ಟಿದ್ದೀರೆಂದು ಓರ್ವ ವಿದ್ಯಾರ್ಥಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಪ್ರಶ್ನೆ ಮಾಡಿದಾಗ ಸಹಜವಾಗಿ ವಯಸ್ಸಿಗೆ ತಕ್ಕಂತೆ ಮೌನ ಮುರಿದು ನಗುತ್ತ ನಾನು ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ಒಟ್ಟಾಗಿ ಭಾರತೀಯ ಜನತಾ ಪಕ್ಷವನ್ನು ಕಟ್ಟಿದ್ದು ಸಮರ್ಥ ಭಾರತ ನಿರ್ಮಾಣ ಮಾಡಲಿಕ್ಕೆ ಎಂದು ಉತ್ತರಿಸಿದ್ದಾರೆಂದು ಹೇಳಿದರು.

ಸಮೃದ್ಧ, ಶಕ್ತಿಶಾಲಿ, ಸ್ವಾಭಿಮಾನಿ ಭಾರತವನ್ನು ನಿರ್ಮಾಣ ಮಾಡಬೇಕೆಂದು ಗುರಿ ಹೊಂದಿದ್ದ ನಮ್ಮ ನಾಯಕರು ಅಂದಿನಿಂದ ಈವರೆಗೆ ಪ್ರತಿಯೊಂದು ಬಿಜೆಪಿ ಕಾರ್ಯಚಟುವಟಿಕೆಗಳು ಸೋತಿರಬಹುದು, ಗೆದ್ದಿರಬಹುದು, ಅಧಿಕಾರ ಇರಲಿ ಇಲ್ಲದಿರಲಿ ರಾಷ್ಟ್ರವ್ಯಾಪಿ ವಿಚಾರವನ್ನು ರಾಜಿ ಮಾಡಿಕೊಳ್ಳುವ ಇರಾದೆ ಬಿಜೆಪಿ ಮುಂದೆ ಇರಲಿಲ್ಲ ಎಂದು ತಿಳಿಸಿದರು.

ಇಡೀ ಪ್ರಪಂಚದಲ್ಲೇ ಅತೀ ಹೆಚ್ಚು ಸದಸ್ಯರನ್ನೊಳಗೊಂಡಿರುವ ಒಂದು ರಾಷ್ಟ್ರೀಯ ಪಕ್ಷ ಇದ್ದರೆ ಅದು ಬಿಜೆಪಿ. ಈ ಎಲ್ಲಾ ದಾಖಲೆಗಳ ವಿದ್ಯಾಮಾನಗಳ ನಡುವೆ ಏ.೨೬ ರಂದು ಲೋಕಸಭಾ ಚುನಾವಣೆ ನಡೆಯುತ್ತಿದೆ. ಈ ಚುನಾವಣೆ ಒಂದು ದೃಷ್ಟಿಯಲ್ಲಿ ರಾಷ್ಟ್ರಭಕ್ತಿ, ರಾಷ್ಟ್ರವನ್ನು ಬೆಂಬಲಿಸುವವರು, ವಿರೋಧಿಸುವವರ ಮಧ್ಯೆ ಸಂಘರ್ಷವಾಗಿ ಮಾರ್ಪಾಡಾಗುತ್ತಿದೆ ಎಂದು ಎಚ್ಚರಿಸಿದರು.

ಸಮರ್ಥ, ಸಮೃದ್ಧ, ಶಕ್ತಿಶಾಲಿ ಭಾರತ ನಿರ್ಮಾಣವಾಗಬೇಕೆಂಬುದು ನಮ್ಮ ಹಿರಿಯರ ಕನಸಾಗಿತ್ತು. ನರೇಂದ್ರ ಮೋದಿ ಪ್ರಧಾನಿಯಾಗುವ ಮುನ್ನ ಭಾರತದಲ್ಲಿ ಭಯೋತ್ಪಾದನೆ ಹೆಚ್ಚಾಗಿತ್ತು, ಕಾಶ್ಮೀರದಲ್ಲಿ ಉಗ್ರರ ಹಾವಳಿ ತಲೆ ಎತ್ತಿತ್ತು. ಇಂದು ಭಯೋತ್ಪಾದನೆ ನಿರ್ಮೂಲನೆಯತ್ತ ಕೇಂದ್ರ ಸರ್ಕಾರ ಹೆಜ್ಜೆ ಇಟ್ಟಿದೆ ಎಂದು ಶ್ಲಾಘಿಸಿದರು.

ಯುಪಿಎ ಸರ್ಕಾರ ಭಾರತದ ಅನ್ನ, ನೀರು, ಗಾಳಿ ಸೇವಿಸಿ ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದ ಅವರು ನಮೋ ಪ್ರಧಾನಿಯಾದ ನಂತರ ಕಾಶ್ಮೀರದ ೩೭೦ ಅರ್ಟಿಕಲ್ ರದ್ದುಮಾಡಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ಪ್ರವಾಸೋದ್ಯಮಕ್ಕೆ ಮುಕ್ತ ಅವಕಾಶ ಕಲ್ಪಿಸಿದ್ದಾರೆ ಎಂದರು.

ಭಾರತದ ಚಿನ್ನವನ್ನು ವಿದೇಶಕ್ಕೆ ಅಡವಿಟ್ಟು ಒಂದು ಕಾಲದಲ್ಲಿ ಸಂಕೋಲೆಯಲ್ಲಿದ್ದ ಭಾರತವನ್ನು ಆರ್ಥಿಕ ಸುಧಾರಣೆ ಮಾಡಿ ಪ್ರಪಂಚದ ಆರ್ಥಿಕ ಸುಸ್ಥಿತಿಯಲ್ಲಿರುವ ದೇಶಗಳಲ್ಲಿ ಭಾರತ ೫ನೇ ಸ್ಥಾನದಲ್ಲಿದೆ ಎಂದ ಅವರು ಈ ದೇಶದ ಸಂರಕ್ಷಣೆ, ಭದ್ರತೆ, ಸ್ವಾಭಿಮಾನದ ವಿಚಾರವಾಗಿ ಪ್ರತಿಯೊಬ್ಬ ನಾಗರೀಕನು ಈ ಎಲ್ಲಾ ಕಾರಣಗಳನ್ನು ಗಂಭೀರ ಚಿಂತನೆ ಮಾಡಿ ಮತ ಚಲಾಯಿಸಬೇಕೆಂದು ಮನವಿ ಮಾಡಿದರು.

ಮಾಜಿ ಸಚಿವ ಸಿ,ಟಿ ರವಿ ಮಾತನಾಡಿ, ಈ ಚುನಾವಣೆ ನಮ್ಮ ದೇಶ ಉಳಿಸಿಕೊಳ್ಳುವ ಚುನಾವಣೆಯಾಗಿದೆ. ಮೈಮರೆತರೆ ರಾಷ್ಟ್ರ ವಿನಾಶಕ್ಕೆ ದಾರಿಯಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯಾಗಿರುವುದರಿಂದ ಬಾಲ ಬಿಚ್ಚುವವರೆಲ್ಲ ಬಾಲ ಮುದುರಿಕೊಂಡಿದ್ದಾರೆ. ಕಾಶ್ಮೀರದಲ್ಲಿ ಸೈನಿಕರ ಮೇಲೆ ಕಲ್ಲು ಹೊಡೆಯುತ್ತಿದ್ದವರು ಇಂದು ಬಾವುಟ ಹಿಡಿದು ಭಾರತ್ ಮತಾಕಿ ಜೈ ಅನ್ನುವಂತಹ ವಾತಾವರಣ ನಿರ್ಮಾಣ ಮಾಡಿದ್ದು, ಬಿಜೆಪಿ ಸರ್ಕಾರ ನಮೋ ಪ್ರಧಾನಿಯಾದ ಕಾರಣಕ್ಕೆ ಎಂದರು.

ಕಾಂಗ್ರೆಸ್ ನಮಗೆ ಅಧಿಕಾರ ಸಿಗುತ್ತೆ, ಆರ್ಟಿಕಲ್ ೩೭೦ ಯನ್ನು ಮತ್ತೆ ತರುತ್ತೇವೆಂದು ಹೇಳಿರುವುದು ಭಯೋತ್ಪಾದನೆಗೆ ಪರವಾನಗಿ ಕೊಡುತ್ತೇವೆ. ಕಾಶ್ಮೀರ ಬೇರೆ ಎಂಬುದಕ್ಕೆ ಗೊಬ್ಬರ ನೀರು ಹಾಕುತ್ತೇವೆ, ಸೈನಿಕರ ಮೇಲೆ ಪುನಹಾ ಕಲ್ಲು ಹೊಡೆಯಲು ಅವಕಾಶ ಕೊಡುತ್ತೇವೆ ಎಂಬಂತಾಗಿದೆ. ಆದ್ದರಿಂದ ಈ ಎಲ್ಲಾ ಕಾರಣಕ್ಕೆ ಬಿಜೆಪಿ ಮತ್ತೆ ಅಧಿಕಾರ ಹಿಡಿಯಬೇಕು ಎಂದು ವಿನಂತಿಸಿದರು.

ಜ.೨೨ ರಂದು ರಾಮಲಲ್ಲಾನ ಪ್ರತಿಷ್ಠಾಪನೆ ಮಾಡಿ ಇಡೀ ದೇಶ ಧಾರ್ಮಿಕವಾಗಿ ಕಣ್ತುಂಬಿಕೊಂಡಿದ್ದು ಶ್ರೀರಾಮನನ್ನು ಗುಣಗಾನ ಮಾಡಿದ್ದು ಚುನಾವಣೆ ಬಂದಾಗ ಮಾತ್ರ ಮಂದಿರ ನಿರ್ಮಾಣ ವಿಷಯ ಪ್ರಸ್ತಾಪ ಮಾಡುತ್ತೀರೆಂದು ವಿರೋಧ ಪಕ್ಷಗಳು ಟೀಕೆ ಮಾಡುತ್ತಿದ್ದವರಿಗೆ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಮಾಡಿ ರಾಮಲಲ್ಲಾ ಪ್ರತಿಷ್ಠಾಪನೆಯಾಗಿದೆ. ಆದರೆ ಓವೈಸಿ ಹೇಳುತ್ತಾನೆ. ಮತ್ತೆ ಬಾಬ್ರಿ ಮಸೀದಿ ಕಟ್ಟುತ್ತೇವೆಂದು ಇದಕ್ಕೆ ಅವಕಾಶ ಕೊಡಬಾರದು ಅನ್ನುವುದಾದರೆ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂದರು.

ಕೇವಲ ಅಯೋಧ್ಯೆಯಲ್ಲ ಕಾಶಿ ಮಥುರಾಕ್ಕೂ ಓಟಿನ ಮೂಲಕ ಬಾಕಿ ಚುಕ್ತ ಮಾಡಬೇಕಾಗಿದೆ ಅದಕ್ಕಾಗಿ ಬಿಜೆಪಿಯನ್ನು ಗೆಲ್ಲಿಸಬೇಕು. ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಮತ ನೀಡಿ ಆಶೀರ್ವಾದಿಸಬೇಕೆಂದು ವಿನಂತಿ ಮಾಡಿದರು.

ಕೇಂದ್ರ ಸರ್ಕಾರದ ಕಳೆದ ೧೦ ವರ್ಷದ ಆಡಳಿತದಲ್ಲಿ ಆಗಿರುವ ಅಭಿವೃದ್ಧಿ ವಿಚಾರದ ಲೆಕ್ಕವನ್ನು ಮತದಾರರಾದ ನಿಮ್ಮ ಮುಂದೆ ಇಟ್ಟು ಮತ ಕೇಳಲು ಬಂದಿದ್ದೇವೆ. ರಷ್ಯ-ಉಕ್ರೇನ್ ಮಧ್ಯೆ ನಡೆದ ಯುದ್ಧದಲ್ಲಿ ಸಿಕ್ಕಿಹಾಕಿಕೊಂಡಿದ್ದ ೨೩ ಸಾವಿರ ಭಾರತೀಯರನ್ನು ರಕ್ಷಣೆ ಮಾಡಿದ್ದು ದುಬೈನ ಅಬುದಾಬಿಯಲ್ಲಿ. ಸ್ವಾಮಿ ನಾರಾಯಣ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಯಿತು. ಇದರ ಉದ್ಘಾಟನೆಗೆ ನಮೋ ಹೋಗಿದ್ದರು. ಭಗವದ್ಗೀತೆ ಪಠಣ ಮಾಡಲು ಬಿಡದ ದೇಶದಲ್ಲಿ ಸ್ವಾಮಿ ನಾರಾಯಣ ಭವ್ಯ ಮಂದಿರ ಸ್ಥಾಪನೆಯಾಗಿದೆ. ನೀವು ಕೊಟ್ಟ ಮತ ವೇಸ್ಟ್ ಆಗಿಲ್ಲ ಎಂದು ಹೇಳಿದರು.

ಜಲಜೀವನ್ ಮಿಷನ್, ಸೂಪರ್ ಸ್ಪಷಾಲಿಟಿ ಆಸ್ಪತ್ರೆ, ಅಮೃತ್ ಯೋಜನೆ ಈ ಎಲ್ಲಾ ಕಾಮಗಾರಿಗಳಿಗೆ ನರೇಂದ್ರ ಮೋದಿಯವರು ಅನುದಾನ ನೀಡಿದ್ದಾರೆ. ಕಡೂರು-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ಮೂಡಿಗೆರೆವರೆಗೆ ವಿಸ್ತರಣೆಯಾಗಿದೆ. ಬೇಲೂರು-ಹಾಸನ ರಸ್ತೆ ಟೆಂಡರ್ ಆಗಿ ಡಿಪಿಆರ್ ಆಗುತ್ತಿದೆ. ಅಭಿವೃದ್ಧಿ ಕೆಲಸವನ್ನು ಮಾಡಿದ್ದೇವೆ. ೪೫ ಸಾವಿರ ಕೋಟಿ ರೂ ಜನಧನ್ ಖಾತೆ ತೆರೆದು ಬಡವರಿಗೆ ಬದುಕು ಕೊಟ್ಟಿದ್ದೇವೆ ಎಂದು ಹೇಳಿದರು.

ಬಿಜೆಪಿ ಯುವಮೊರ್ಚಾ ನಗರಾಧ್ಯಕ್ಷ ಜೀವನ್‌ರಂಗನಾಥ್ ಮಾತನಾಡಿ, ಲೋಕಸಭೆಗೆ ಸಧ್ಯದಲ್ಲೇ ಚುನಾವಣೆ ನಡೆಯಲಿದೆ. ಅದಕ್ಕೆ ೧೮ ವರ್ಷ ತುಂಬಿದ ಯುವ ಮತದಾರರನ್ನು ಜೋಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ಗ್ರಾ.ಪಂ., ಪ್ರತಿ ವಾರ್ಡ್‌ಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು, ಯುವಕರು ಇಂದಿನಿಂದಲೇ ಯುವ ಮತದಾರರನ್ನು ಮತಗಟ್ಟೆಗೆ ಕರೆತಂದು ಬಿಜೆಪಿಗೆ ಮತದಾನ ಮಾಡಿಸುವ ಸಂಬಂಧ ಕಾರ್ಯಚಟುವಟಿಕೆಗಳನ್ನು ಆರಂಭಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ್‌ಶೆಟ್ಟಿ, ನಗರಾಧ್ಯಕ್ಷ ಪುಷ್ಪರಾಜ್, ಮುಖಂಡರಾದ ಹೆಚ್.ಸಿ ಕಲ್ಮರುಡಪ್ಪ, ಕೋಟೆ ರಂಗನಾಥ್, ಅಮೃತೇಶ್, ಸುಜಾತಶಿವಕುಮಾರ್, ಕೌಶಿಕ್, ಕುಮಾರ್, ಮಧುಕುಮಾರ್ ರಾಜ್ ಅರಸ್, ವೆಂಕಟೇಶ್, ಬಿಜೆಪಿ ಯುವ ಮೊರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೊಟ್ಯಾನ್ ಮತ್ತಿತರರು ಇದ್ದರು.

Discussion program on Namo Yuva Choupal 400