ಚಿಕ್ಕಮಗಳೂರು: ಬೇಸಿಗೆಯ ಬೇಗೆ ತೀವ್ರ ಗೊಳ್ಳುತ್ತಿದ್ದಂತೆ ಅಗ್ನಿ ಅವಘಡಗಳು ಕೂಡಾ ಹೆಚ್ಚುತ್ತಿವೆ. ಆಕಸ್ಮಿಕವಾಗಿ ಹುಲ್ಲಿಗೆ ಹತ್ತಿದ ಬೆಂಕಿ ಅಕ್ಕಪಕ್ಕೆಲ್ಲ ಆವರಿಸಿ ನಾಲ್ಕು ಕಾರುಗಳು ಭಸ್ಮವಾಗಿವೆ. ನಗರದ ಉಪ್ಪಳ್ಳಿಯ ಬದ್ರಿಯಾ ಗ್ಯಾರೇಜ್ ನಲ್ಲಿ ಭಾನುವಾರ ಘಟನೆ ನಡೆದಿದ್ದು ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಮಲೆನಾಡಲ್ಲೂ ರಣಬಿಸಿಲು ಭೂಮಿ ಯನ್ನು ಕಾದ ಕಾವಲಿಯಂತೆ ಮಾಡಿದ್ದು ಬಿಸಿಲಿನ ಝಳಕ್ಕೆ ಸಣ್ಣ ಹುಲ್ಲಿನ ಕಡ್ಡಿಯೂ ಬೆಂಕಿ ಉರಿಯಾಗಿ ನಾಲ್ಕು ಕಾರುಗಳಿಗೆ ಅಗ್ನಿ ಸ್ಪರ್ಷವಾಗಿದೆ. ಒಂದೇ ಕಡೆ ನಿಲ್ಲಿಸಿದ್ದ ನಾಲ್ಕು ಕಾರುಗಳು ಬೆಂಕಿಗೆ ಆಹುತಿಯಾಗಿವೆ.

ನಗರದ ಉಪ್ಪಳ್ಳಿ ಸಮೀಪದ ಬದ್ರಿಯ ಗ್ಯಾರೇಜ್ ನಲ್ಲಿ ರಿಪೇರಿಗೆ ಬಿಟ್ಟಿದ್ದ ನಾಲ್ಕು ಕಾರುಗಳು ಏಕಾಏಕಿ ತಗುಲಿದ ಬೆಂಕಿ ಯಿಂದ ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

ಬೆಂಕಿಯ ಕೆನ್ನಾಲಿಗೆ ಮತ್ತಷ್ಟು ಆವರಿಸುವ ಮೊದಲೇ ಹೆಚ್ಚಿನ ಅನಾಹುತ ತಪ್ಪಿಸಲಾಗಿದೆ. ಇಷ್ಟೇ ಅಲ್ಲದೇ ಪಕ್ಕದಲ್ಲಿ ನಿಲ್ಲಿಸಿದ್ದ ಮತ್ತೊಂದು ಕಾರಿನ ಟೈರ್ ಸಹಾ ಬೆಂಕಿ ತಗುಲಿದೆ.ಬೇಸಿಗೆಯ ದಿನಗಳಲ್ಲಿ ಬೆಂಕಿ ಅವಘಡಗಳು ಹೆಚ್ಚುತ್ತಿದ್ದು ಸಣ್ಣಪುಟ್ಟ ಕಿಡಿಗಳು ಸಹಾ ದೊಡ್ಡ ಅನಾಹುತ ಸೃಷ್ಟಿಸಲು ಅವಕಾಶ ಮಾಡಿಕೊಡುವಂತಾಗಿದೆ.

Four cars were gutted in an accidental fire