ಚಿಕ್ಕಮಗಳೂರು: ರಾಷ್ಟ್ರದ ಹಿತದೃಷ್ಠಿ ಮತ್ತು ಪಕ್ಷ ಸಂಘಟನೆ ಬಲಪಡಿಸಲು ಚುನಾವಣೆ ಸಂದರ್ಭದಲ್ಲಿ ರಾಜಕಾರಣಕ್ಕಾಗಿ ಕೆಲಸ ಮಾಡುವ ಕಾರ್ಯಕರ್ತರು ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದ್ದು ಎಂಬ ಆಲೋಚನೆಯಲ್ಲಿ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕಿದೆ ಎಂದು ಓಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಸ್ತುವಾರಿಯಾಗಿರುವ ಉಡುಪಿಯ ನಾರಾಯಣ ಅವರು ಕರೆ ನೀಡಿದರು.

ಅವರು ಇಂದು ಜಿಲ್ಲಾ ಬಿಜೆಪಿ ಕಛೇರಿ ಪಾಂಚಜನ್ಯದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಬಿಜೆಪಿ ಮತ್ತು ಓಬಿಸಿ ಮೋರ್ಚಾ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಬಿಜೆಪಿಯಲ್ಲಿ ವಿಶಿಷ್ಟವಾಗಿರುವ ಕಾರ್ಯಕರ್ತರು ತಳಮಟ್ಟದಿಂದ ಪಕ್ಷಸಂಘಟನೆಗೆ ಕೆಲಸ ಮಾಡುತ್ತಾರೆ. ಜಿಲ್ಲೆಯ ಸಮಸ್ಯೆಗಳನ್ನು ಇಟ್ಟುಕೊಂಡು ೨೦೯ ಮುಖ್ಯ ಜಾತಿಗಳಿರುವ ಈ ಎಲ್ಲಾ ಸಮುದಾಯದ ಜನರನ್ನು ಸಮಾಜದಲ್ಲಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಪಕ್ಷ ಸಂಘಟನೆ ಮಾಡಬೇಕಾಗಿದೆ ಎಂದು ಹೇಳಿದರು.

ಬಿಜೆಪಿಯಲ್ಲಿ ಹಿಂದುಗಳಿದ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆಯವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವುದು ನಾಚಿಕೆಗೇಡಿನ ಸಂಗತಿ. ಬಿಜೆಪಿ ಕೊಟ್ಟ ಅವಕಾಶವನ್ನು ಮರೆತ ವ್ಯಕ್ತಿಯಾಗಿದ್ದಾರೆ ಎಂದು ಆರೋಪಿಸಿದ ಅವರು ಬಿಜೆಪಿ ಅಭ್ಯರ್ಥಿ ನಿಷ್ಕಲ್ಮಶವಾದ ಕೋಟಾ ಶ್ರೀನಿವಾಸ ಪೂಜಾರಿ ಅವರ ಗೆಲುವಿಗೆ ಎಲ್ಲರೂ ಶ್ರಮಿಸಬೇಕೆಂದು ತಿಳಿಸಿದರು.

ಓಬಿಸಿ ಜಿಲ್ಲಾಧ್ಯಕ್ಷ ಲಕ್ಕಪ್ಪ ಮಾತನಾಡಿ, ಜಿಲ್ಲೆಯ ೯ ಮಂಡಲದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಇಲ್ಲದೆ ಯಾವುದೇ ಕಾರಣಕ್ಕೂ ಕಾರ್ಯಕಾರಣಿ ಸಭೆ ನಡೆಸಲು ಅವಕಾಶವಿಲ್ಲ ಎಂಬ ಕಾರಣದಿಂದ ಇದೂವರೆಗೆ ಸಭೆ ನೆಡಸಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು.

ಓಬಿಸಿಯವರಾದ ನಾವು ಸಭೆ ಸೇರುವಲ್ಲಿ ವಿಳಂಭವಾಗಿರುವುದು ಬಿಟ್ಟರೆ ಕಾರ್ಯಚಟುವಟಿಕೆಗಳಲ್ಲಿ ಮುಂದೆ ಇದ್ದೇವೆ. ಪ್ರಧಾನಿ ನರೇಂದ್ರ ಮೋದಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಮತ್ತೊಮ್ಮೆ ಪ್ರಧಾನಿಯಾಗಿಸಲು ಕಾರ್ಯಕರ್ತರು ಕಠಿಣ ಪರಿಶ್ರಮದಿಂದ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬೆಳವಾಡಿ ರವೀಂದ್ರ ಮಾತನಾಡಿ, ಸಭೆ ಸಮಾರಂಭಗಳಲ್ಲಿ ಪಕ್ಷದ ಮುಖಂಡರು ಭಾಗವಹಿಸಿ ಹೇಳುವ ಜವಾಬ್ದಾರಿಗಳನ್ನು ಅರಿತು ಕೆಲಸ ಮಾಡಬೇಕಾದ ಅಗತ್ಯ ಇದೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

ಡೈರಿಯಲ್ಲಿ ಉಲ್ಲೇಖಿತ ವಿಷಯಗಳನ್ನು ದಾಖಲಿಸಿಕೊಂಡು ಜನರಿಗೆ ಮನವರಿಕೆ ಮಾಡುವ ಜವಾಬ್ದಾರಿಯನ್ನು ಕಾರ್ಯಕರ್ತರು ಓಬಿಸಿ ಪಕ್ಷದ ಮುಖಂಡರು ಕೆಲಸ ಮಾಡಬೇಕು. ಈಗ ಚುನಾವಣೆ ಬಂದಿರುವುದರಿಂದ ಜವಾಬ್ದಾರಿ ಹೆಚ್ಚಾಗಿದೆ ಎಂದರು.

ಸುರಕ್ಷಿತ ಭಾರತ, ಸಾಂಸ್ಕೃತಿಕ ಭಾರತ, ವಿಕಸಿತ ಭಾರತ ಹೀಗೆ ಮೂರು ಹಂತದಲ್ಲಿ ಮತದಾರರ ಬಳಿ ವಿಷಯಗಳನ್ನು ಮನವರಿಕೆ ಮಾಡುವ ಮೂಲಕ ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದ್ದು ಇದನ್ನು ನನಸಾಗಿಸಲು ಎಲ್ಲರ ಶ್ರಮ ಅಗತ್ಯ ಎಂದರು.
ಈ ಎಲ್ಲಾ ಅಂಶಗಳನ್ನು ಜನರಿಗೆ ಮನವರಿಕೆ ಮಾಡಿ, ಮತಕೇಳುವ ಜವಾಬ್ದಾರಿ ೯ ಮಂಡಲದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಮೇಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್ ದೇವರಾಜ್ ಶೆಟ್ಟಿ, ಮುಖಂಡರಾದ ಬಿ.ರಾಜಪ್ಪ, ಪ್ರೇಮ್‌ಕುಮಾರ್, ಕೋಟೆ ರಂಗನಾಥ್, ಕನಕರಾಜು, ಜಯಣ್ಣ, ಪುಣ್ಯಪಾಲ್, ಮಣ್ಣೇನಹಳ್ಳಿ ರಾಜು, ಬ್ಯಾಟರಿ ಮಂಜಣ್ಣ, ಯೋಗೀಶ್ ಮತ್ತಿತರರಿದ್ದರು.

District BJP and OBC Morcha Executive Meeting