ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಸೇರಿದಂತೆ ಬಯಲುಸೀಮೆ ಕೆಲವೆಡೆ ಶನಿವಾರ ಮಧ್ಯಾಹ್ನದ ನಂತರ ಗುಡುಗು ಸಹಿತ ಮಳೆಯಾಗಿದ್ದು, ಸಿಡಿಲಿಗೆ ಓರ್ವ ಬಲಿಯಾಗಿದ್ದಾರೆ.
ಎನ್‌.ಆರ್.ಪುರ ತಾಲೂಕಿನ ಅರಳಿಕೊಪ್ಪ ಗ್ರಾಮದ ಸಾಲೂರು ನಿವಾಸಿ ಶಂಕರ್‌ (50) ಮೃತಪಟ್ಟ ದುರ್ದೈವಿ.
ಅಡಿಕೆ ತೋಟದಲ್ಲಿ ಕೆಲಸ ಮಾಡುವ ವೇಳೆಯಲ್ಲಿ ಶಂಕರ್ ಅವರಿಗೆ ಸಿಡಿಲು ಹೊಡೆದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ತರೀಕೆರೆ, ಕಡೂರು, ಚಿಕ್ಕಮಗಳೂರು ಸೇರಿದಂತೆ ಮಲೆನಾಡಿನ ಮೂಡಿಗೆರೆ, ಕಳಸ, ಶೃಂಗೇರಿ, ಎನ್‌.ಆರ್‌.ಪುರ ಹಾಗೂ ಕೊಪ್ಪ ತಾಲೂಕಿನಾದ್ಯಂತ ಗುಡುಗು ಸಹಿತ ಮಳೆ ಬಂದಿದೆ.
ತರೀಕೆರೆ ಪಟ್ಟಣದಲ್ಲಿ ಮಧ್ಯಾಹ್ನ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಮಳೆ ಸುರಿಯಿತು. ಬಿಸಿಲಿನ ಝಳಕ್ಕೆ ತತ್ತರಿಸಿದ ಜನರಿಗೆ ಮಳೆ ತಂಪೆರೆಯಿತು. ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಪಟ್ಟಣದಲ್ಲಿ ಭಾರಿ ಮಳೆಯಾಗಿದ್ದರಿಂದ ಹಲವೆಡೆ ತಗ್ಗಿನ ಪ್ರದೇಶಗಳಲ್ಲಿ ನೀರು ನಿಂತುಕೊಂಡಿದ್ದರೆ ರಸ್ತೆಯ ತುಂಬೆಲ್ಲಾ ತೆರೆದ ಚರಂಡಿಯಲ್ಲಿ ಹರಿಯುವಂತೆ ನೀರು ಹರಿಯುತ್ತಿತ್ತು. ಕೆಲ ಹೊತ್ತು ಜನ ಜೀವನ ಅಸ್ತವ್ಯಸ್ತವಾಗಿತ್ತು.
ಬೀರೂರು ಪಟ್ಟಣದಲ್ಲಿ 10 ನಿಮಿಷ ಮಳೆಯಾಗಿದ್ದರೆ, ಕಡೂರು ತಾಲೂಕಿನ ಸಖರಾಯಪಟ್ಟಣ, ದೇವನೂರು ಹೋಬಳಿಯಲ್ಲೂ ಮಳೆ ಬಂದಿದೆ.
ಚಿಕ್ಕಮಗಳೂರು ನಗರ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಸಂಜೆಯ ವೇಳೆಗೆ ಸಾಧಾರಣ ಮಳೆ ಬಂದಿತು.
ಮೂಡಿಗೆರೆ ಹಾಗೂ ಕಳಸ ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದ್ದರೆ, ಶೃಂಗೇರಿ, ಕೊಪ್ಪ ತಾಲೂಕುಗಳ ಹಲವೆಡೆ ಸುಮಾರು ಒಂದು ಗಂಟೆಗೂ ಕಾಲ ಗುಡುಗು ಸಹಿತ ಮಳೆ ಬಂದಿದೆ. ಎನ್‌.ಆರ್‌.ಪುರ ಪಟ್ಟಣದಲ್ಲಿ ಸಂಜೆ 5 ಗಂಟೆಗೆ ಆರಂಭವಾದ ಮಳೆ ಸುಮಾರು ಅರ್ಧ ಗಂಟೆಗಳ ಕಾಲ ಸುರಿಯಿತು. ಗುಡುಗು ಮಿಂಚಿನ ಆರ್ಭಟ ಜೋರಾಗಿತ್ತು. ಗಾಳಿಯ ಪ್ರಮಾಣ ಕಡಿಮೆ ಇದ್ದರಿಂದ ಹೆಚ್ಚು ಮಳೆ ಆಗಿದೆ.
A victim of thunder and lightning fell in the district