ಚಿಕ್ಕಮಗಳೂರು:  ಜಿಲ್ಲಾಧಿಕಾರಿಗಳು, ಜಿ. ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಸಹಾಯಕ ನಿರ್ದೇಶಕರು ಪ್ರವಾಸೋದ್ಯಮ ಇಲಾಖೆ , ಗ್ರಾಮ ಪಂಚಾಯಿತಿ ಅಧಿಕಾರಿಗಳ ತಂಡ ಇಂದು ಇನಾಂ ದತ್ತಪೀಠ ಭಾಗದ ಹೋಟೆಲ್ ರೆಸಾರ್ಟ್ ಹಾಗೂ ಹೋಂಸ್ಟೇಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಹೊಯ್ಸಳ ಹೋಂಸ್ಟೇ, ಅತ್ತಿಗುಂಡಿ, ಇಲ್ಲಿಗೆ ಭೇಟಿ ನೀಡಿದಾಗ ಹೋಂಸ್ಟೇಯು ಅನಧಿಕೃತವಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡವು ಪರಿಶೀಲಿಸಿ ಹೋಂಸ್ಟೇಗೆ ಬೀಗ ಹಾಕಲಾಯಿತು.

ಹಾಲಿಡೇ ಹೋಂ ರೆಸಾರ್ಟ್ ನಲ್ಲಿ ಪ್ರವಾಸಿಗರಿಗೆ ಸುರಕ್ಷತೆ ಹೊಂದಿಲ್ಲದೇ ಟೆಂಟ್ ಗಳನ್ನು ನಿರ್ಮಿಸಿರುವ ಕಾರಣ ಸದರಿ ಟೆಂಟ್ ಗಳನ್ನು ತೆರವುಗೊಳಿಸಿ ಸೂಕ್ತ ಕಟ್ಟಡ ನಿರ್ಮಿಸಿ ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆ ಪಡೆದು ನಡೆಸಲು ಮಾಲೀಕರಿಗೆ ಸೂಚಿಸಿದರು. ಸ್ಟ್ಯಾನ್ಲಿ ಹೋಂಸ್ಟೇ ಹಾಗೂ ಗ್ರೀನ್ ವುಡ್ ರೆಸಾರ್ಟ್ ಗಳನ್ನು ಭೇಟಿ ನೀಡಿ ಬಿಲ್ ಬುಕ್ ನಿರ್ವಹಣೆ ,ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಹಾಗೂ ಕಸವನ್ನು ಸಮರ್ಪಕ ವಿಲೇವಾರಿ ಮಾಡುವ ಸಂಬಂಧ ಮಾಲೀಕರಿಗೆ ಸೂಚಿಸಲಾಗಿದೆ.

ರಸ್ತೆಗಳಲ್ಲಿ ಇಲಾಖೆಯಿಂದ ಅನುಮತಿ ಪಡೆಯದೇ ರೆಸಾರ್ಟ್ ಹೋಂಸ್ಟೇಗಳಿಗೆ ಸಂಬಂಧಿಸಿದ ಅನಧೀಕೃತವಾಗಿ ಅಳವಡಿಸಿರುವ ನಾಮಫಲಕಗಳನ್ನು ಸ್ಥಳದಲ್ಲಿಯೇ ಅಧಿಕಾರಿಗಳ ತಂಡವು ತೆರವುಗೊಳಿಸಿತು.ಹಾಗೂ ಗಿರಿಭಾಗದ ಇತರೆ ಅನಧೀಕೃತ ನಾಮಫಲಕಗಳನ್ನು ತುರ್ತಾಗಿ ತೆರವುಗೊಳಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.

ಗಿರಿಭಾಗದ ಕೆಲವು ಅಂಗಡಿಗಳನ್ನು ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಪ್ಲಾಸ್ಟಿಕ್ ವಸ್ತುಗಳು ಕಂಡುಬಂದಿದ್ದು ಅದನ್ನು ಇಲಾಖೆಯ ವಶಕ್ಕೆ ಪಡೆದು ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ವಸ್ತುಗಳನ್ನು ಅಂಗಡಿಗಳಲ್ಲಿ ಉಪಯೋಗಿಸದಂತೆ ಎಚ್ಚರಿಸಿದರು.

ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಅನಧೀಕೃತವಾಗಿ ನಡೆಸುತ್ತಿರುವ ಹೋಂಸ್ಟೇಗಳು ಹಾಗೂ ರೆಸಾರ್ಟ್‌ಗಳಿಗೆ ಅಧಿಕಾರಿಗಳ ತಂಡವು ದಿಢೀರ್ ಭೇಟಿ ನೀಡಿ ಪರಿಶೀಲಿಸಿ ಅನಧೀಕೃತ ಕಂಡುಬಂದಲ್ಲಿ ಬಂದ್ ಮಾಡುವ ಸಂಬಂಧ ಅಗತ್ಯ ಕ್ರಮಕೈಗೊಳ್ಳಲು ಉದ್ದೇಶಿಸಲಾಗಿದೆ.

ಈ ಸಂಬಂಧವಾಗಿ ಅನುಮೋದನೆ ಪಡೆಯದೇ ಇರುವಂತಹ ಹೋಟೆಲ್ /ಹೋಂಸ್ಟೇ/ರೆಸಾರ್ಟ್ ಗಳು ಪ್ರವಾಸೋದ್ಯಮ ಇಲಾಖೆಯಿಂದ ಹಾಗೂ ಸಕ್ಷಮ ಪ್ರಾಧಿಕಾರಗಳಿಂದಲೂ ಅನುಮೋದನೆ ಪಡೆದು ನಡೆಸಲು ಈ ಮೂಲಕ ತಿಳಿಸಲಾಗಿದೆ. ಅಲ್ಲದೇ ಈಗಾಗಲೇ ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆ ಪಡೆದಿರುವಂತಹ ರೆಸಾರ್ಟ್ ಮತ್ತು ಹೋಂಸ್ಟೇಗಳು ಇಲಾಖೆಯ ನಿಯಮಗಳನ್ನು ಅನುಸರಿಸದೇ ಇರುವುದು ಕಂಡುಬಂದಲ್ಲಿ ಅಂತಹ ರೆಸಾರ್ಟ್ ಮತ್ತು ಹೋಂಸ್ಟೇಗಳನ್ನು ಸಹ ರದ್ದುಪಡಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆಂದು ಅಧಿಕಾರಿಗಳ ತಂಡವು ತಿಳಿಸಿದೆ.

District Collectors for Resort- Homestays- G. Sudden visit of Chief Executive Officer of PT