ಆಲ್ದೂರು: ಹುಲಿ ದಾಳಿಗೆ ಐದು ಜಾನುವಾರಗಳು ಮೃತಪಟ್ಟಿರು ಘಟನೆ ಸಮೀಪದ ಕಂಚಿಕಲ್ಲು ದುರ್ಗ ಅರಣ್ಯ ಸಮೀಪದ ಕಠಾರದಳ್ಳಿ ಗ್ರಾಮದ ಬಳಿನಡೆದಿದೆ.

ಗ್ರಾಮದ ಚಂದ್ರು ಮತ್ತು ಮುಳ್ಳಪ್ಪ ಎಂಬುವರ ಜಾನುವಾರುಗಳು ಮೇಯಲು ಹೋಗಿದ್ದು, ವಾಪಸ್ ಬಂದಿರಲಿಲ್ಲ. ಖಾಲಿದ್ ಎಂಬುವವರ ತೋಟದಲ್ಲಿ ಐದು ಜಾನುವಾರುಗಳ ಮೃತದೇಹ ಬುಧವಾರ ಪತ್ತೆಯಾಗಿದೆ. ಮತ್ತೊಂದು ಹಸು ತೀವ್ರವಾಗಿ ಗಾಯಗೊಂಡು ನಿತ್ರಾಣಗೊಂಡಿದೆ ಎಂದು ಗ್ರಾಮದ ಚಂದ್ರು ತಿಳಿಸಿದರು.

ಆನೆಗಳ ಉಪಟಳದಿಂದ ಈ ಭಾಗದ ಜನ ರೋಸಿ ಹೋಗಿದ್ದರು. ಈಗ ಹುಲಿ ದಾಳಿ ಸುತ್ತಮುತ್ತಲ ಜನರಲ್ಲಿ ಆತಂಕ ಹುಟ್ಟಿಸಿದೆ. ಜಾನುವಾರುಗಳ ಮಾಲೀಕರಿಗೆ ಅರಣ್ಯ ಇಲಾಖೆ ಪರಿಹಾರ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಚ್.ನಟರಾಜ್ ಒತ್ತಾಯಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಉಪಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌ಬಾಬು, ಹುಲಿ ಯಾರ ಕಣ್ಣಿಗೂ ಕಾಣಿಸಿಕೊಂಡಿಲ್ಲ. ದಾಳಿ ನಡೆಸಿರುವ ಸ್ವರೂಪ ನೋಡಿದರೆ ಹುಲಿ ದಾಳಿ ಎಂಬುದು ಖಚಿತವಾಗಿದೆ. ಮೃತಪಟ್ಟಿರುವ ಜಾನುವಾರುಗಳ ಮಾಲೀಕರಿಗೆ ಶೀಘ್ರವೇ ಪರಿಹಾರ ಕೊಡಿಸಲಾಗುವುದು ಎಂದರು.

ಆ ಭಾಗದಲ್ಲಿ ವನ್ಯಪ್ರಾಣಿಗಳ ಓಡಾಟ ಹೆಚ್ಚಿದ್ದು, ಕೆಲ ದಿನಗಳ ಮಟ್ಟಿಗೆ ಸ್ಥಳೀಯರು ಎಚ್ಚರಿಕೆಯಿಂದ ಇರಬೇಕು. ಜಾಗೃತಿ ಮೂಡಿಸುವ ಕೆಲಸವನ್ನು ಅರಣ್ಯ ಇಲಾಖೆಯಿಂದ ಮೂಡಿಸಲಾಗುವುದು. ಜಾನುವಾರುಗಳನ್ನು ಸುತ್ತಮುತ್ತ ಪ್ರದೇಶದಲ್ಲಿ ಮೇಯಿಸುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚಿಸಲಾಗುವುದು ಎಂದು ಹೇಳಿದರು.

Cattle killed in tiger attack in Katharadalli village