ಚಿಕ್ಕಮಗಳೂರು: ವಿದ್ಯೆ, ಯಾರ ಸ್ವತ್ತು ಅಲ್ಲ. ಯಾರಲ್ಲಿ ಗುರಿ ಇರುತ್ತದೆಯೋ ಓದಬೇಕೆಂಬ ಛಲ ಬರುತ್ತದೆಯೋ ಅವರ ಸ್ವತ್ತಾಗಲಿದೆ. ಅವರಿಗೆ ಪೋಷಕರು ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.

ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮಕ್ಕಳಿಗೆ ಶನಿವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಅವರು ಮಾತನಾಡಿದರು.

ವಿದ್ಯೆ ಯಾರ ಸ್ವತ್ತು ಅಲ್ಲ. ನಾವು ಚೆನ್ನಾಗಿ ಓದಿದರೆ ಸಾಧನೆ ಮಾಡ್ತಿವಿ ಎಂಬುದಕ್ಕೆ ಇದೊಂದು ನಿದರ್ಶನ. ಬಹಳಷ್ಟು ವಿದ್ಯಾರ್ಥಿಗಳು ಅತ್ಯುನ್ನತವಾದ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಿದ್ದಾರೆ. ಇದರ ಹಿಂದೆ ತಂದೆ ಮತ್ತು ತಾಯಿಯವರ ಶ್ರಮ ಇದೆ ಎಂದರು.

ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ರಜೆ ಸಿಗೋದಿಲ್ಲ, ಹೆಚ್ಚಿನ ಸಮಯವನ್ನು ಕರ್ತವ್ಯದಲ್ಲಿ ಕಳೆಯುತ್ತಾರೆ. ಪೊಲೀಸ್ ಸಿಬ್ಬಂದಿಗಳ ಮಕ್ಕಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆಂದರೆ ಅದರ ಹಿಂದೆ ತಾಯಿಯವರ ಶ್ರಮ ತುಂಬಾನೆ ಇರುತ್ತದೆ ಎಂದಾರ್ಥ ಎಂದರು.

ಚೆನ್ನಾಗಿ ಓದಿ, ಮುಂದೆ ಜೀವನ ಹೇಗೆ ರೂಪಿಸಿಕೊಳ್ಳಬೇಕು ಎಂಬ ದೃಢವಾದ ಸಂಕಲ್ಪವನ್ನು ವಿದ್ಯಾಭ್ಯಾಸದ ಹಂತದಲ್ಲೇ ರೂಪಿಸಬೇಕು. ದಿನದ ೨೪ ಗಂಟೆಗಳ ಕಾಲ ಕೆಲಸ ಮಾಡುವ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ತಮ್ಮ ಮಕ್ಕಳಿಗೆ ಓದಲು ಪ್ರೋತ್ಸಾಹ ನೀಡಿದರೆ, ಅವರು ಉನ್ನತ ಹುದ್ದೆಗೆ ಸೇರಿದರೆ, ನಮ್ಮನ್ನು ನೋಡಿ ಸಾಧನೆ ಮಾಡುವ ಛಲ ಬೇರೆಯವರಲ್ಲೂ ಬರಬೇಕು. ನಮ್ಮ ಮಕ್ಕಳು ನಿದರ್ಶನ ಆಗಬೇಕು ಎಂದ ಅವರು, ಮಕ್ಕಳಿಗಾಗಿ ಆಸ್ತಿ ಮಾಡುವುದಲ್ಲ, ಮಕ್ಕಳನ್ನು ಆಸ್ತಿವಂತರನ್ನಾಗಿ ಮಾಡಿ ಎಂದು ಕರೆ ನೀಡಿದರು.

ಜೀವನದಲ್ಲಿ ಪ್ರತಿಯೊಬ್ಬರು ಗುರಿಯನ್ನು ಹೊಂದಿರಬೇಕು, ಅದನ್ನು ಮುಟ್ಟಲು ಛಲ ಇರಬೇಕು, ಪರಿಶ್ರಮ ಇರಬೇಕು. ಆಗ ಮಾತ್ರ ಗುರಿ ಮುಟ್ಟಲು ಸಾಧ್ಯ. ಕಷ್ಟ ಬಂದಾಗ ಹಿಂಜರಿಯಬಾರದು, ಮುನ್ನಡೆಯುವ ಛಲ ರೂಢಿಸಿಕೊಳ್ಳಬೇಕು. ಪೋಷಕರು ಮಕ್ಕಳಿಗೆ ಮಾರ್ಗದರ್ಶನ, ಪ್ರೋತ್ಸಾಹ ನೀಡಬೇಕು. ಮಕ್ಕಳು ಭವಿಷ್ಯದಲ್ಲಿ ಉತ್ತಮ ಸಾಧಕರಾಗಿ, ಪ್ರಜೆಯಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕೃಷ್ಣಮೂರ್ತಿ, ಡಿವೈಎಸ್ಪಿ ಪುರುಷೋತ್ತಮ್ ಉಪಸ್ಥಿತರಿದ್ದರು.

Education is no one’s property