ಬೆಂಗಳೂರು:‌ ಮುಂದಿನ ಬೇಸಿಗೆಯಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸುವ ಉದ್ದೇಶದಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪಕ್ಷದ ಕೇಂದ್ರೀಯ ಘಟಕವನ್ನು ಪುನಾರಚನೆಗೊಳಿಸಿದ್ದಾರೆ. ಕರ್ನಾಟಕದ ಮಾಜಿ ಸಚಿವ ಸಿ.ಟಿ.ರವಿ ಸೇರಿದಂತೆ ಇಬ್ಬರು ಪ್ರಧಾನ ಕಾರ್ಯದರ್ಶಿಗಳನ್ನು ಕೈಬಿಡಲಾಗಿದೆ.

ಇದೇ ವೇಳೆ, ಕನ್ನಡಿಗ ಬಿ.ಎಲ್‌.ಸಂತೋಷ್‌ ಅವರನ್ನು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರೆಸಲಾಗಿದ್ದು, ಅವರು ಈಗ ತಂಡದಲ್ಲಿ ಉಳಿದ ಏಕೈಕ ಕನ್ನಡಿಗರಾಗಿದ್ದಾರೆ. ಆದರೆ ಸಿ.ಟಿ.ರವಿ ಅವರಿಗೆ ಕೊಕ್‌ ನೀಡಿರುವ ವಿದ್ಯಮಾನವು, ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಬಹುದು ಎಂಬ ಗುಮಾನಿಗೆ ಪುಷ್ಟಿನೀಡಿದೆ. ಹಾಲಿ ರಾಜ್ಯಾಧ್ಯಕ್ಷರಾಗಿರುವ ನಳಿನ್‌ ಕುಮಾರ್‌ ಕಟೀಲ್‌ ಅವಧಿ ಈಗಾಗಲೇ ಮುಗಿದಿದ್ದು, ನೂತನ ಅಧ್ಯಕ್ಷರ ಆಯ್ಕೆಗೆ ತೆರೆಮರೆಯಲ್ಲಿ ಕಸರತ್ತು ನಡೆದಿದೆ.

ಸಿ.ಟಿ.ರವಿ ಹೆಸರು ಪ್ರಮುಖ: ಒಕ್ಕಲಿಗ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂಬ ಚರ್ಚೆ ನಡೆದಿದ್ದು, ಸಿ.ಟಿ.ರವಿ ಅವರ ಹೆಸರೂ ಪ್ರಮುಖವಾಗಿ ಕೇಳಿಬರುತ್ತಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವರಾದ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಆರ್‌.ಅಶೋಕ್‌ ಇನ್ನಿತರ ಹೆಸರುಗಳೂ ಒಕ್ಕಲಿಗ ಸಮುದಾಯದಿಂದ ಪರಿಶೀಲನೆಯಲ್ಲಿವೆ. ಆದರೆ ಇದುವರೆಗೆ ಇಂಥದ್ದೇ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂಬುದರ ನಿರ್ಣಯ ಆಗಿಲ್ಲ. ಇದೀಗ ರವಿ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೈಬಿಟ್ಟಿರುವುದರಿಂದ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಸಲುವಾಗಿಯೇ ಕೈಬಿಟ್ಟಿರಬಹುದು ಎನ್ನುವ ಸುದ್ದಿ ಬಿಜೆಪಿ ಪಾಳೆಯದಲ್ಲಿ ಬಲವಾಗಿ ಹಬ್ಬಿದೆ.

ಇದಕ್ಕೆ ಪೂರಕ ಎಂಬಂತೆ ರವಿ ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಮಂಡಿಯೂರಿ ಕಾಲಿಗೆ ನಮಸ್ಕರಿಸಿ ಮಾತುಕತೆ ನಡೆಸಿದ್ದರು. ರವಿ ಅವರಿಗೂ ಮತ್ತು ಯಡಿಯೂರಪ್ಪ ಅವರಿಗೂ ಅಷ್ಟಕಷ್ಟೆಎನ್ನುವುದು ತಿಳಿದಿರುವ ಸಂಗತಿ. ಹಿಂದೆ ಹಲವು ಬಾರಿ ರವಿ ಅವರು ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ಟೀಕೆ ಟಿಪ್ಪಣಿ ಮಾಡಿದ್ದರು. ದಿಢೀರನೆ ಈ ಭೇಟಿಗೆ ಕಾರಣ ಯಡಿಯೂರಪ್ಪ ಅವರ ವಿಶ್ವಾಸ, ಆಶೀರ್ವಾದ ಪಡೆಯುವುದು ಎಂಬ ಮಾತು ಕೇಳಿಬಂದಿತ್ತು.

ಇದೆಲ್ಲದರ ನಡುವೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗುವುದೇ ಎನ್ನುವ ಚರ್ಚೆಯೂ ಪಕ್ಷದಲ್ಲಿ ನಡೆದಿದೆ. ವರಿಷ್ಠರು ತೀರ್ಮಾನಿಸಿದರೆ ಎಲ್ಲವೂ ಸಾಧ್ಯವಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಒಂದು ವೇಳೆ ಸಿ.ಟಿ.ರವಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಬಳಿಕ 2ನೇ ಬಾರಿ ಒಕ್ಕಲಿಗರು ರಾಜ್ಯಾಧ್ಯಕ್ಷ ಸ್ಥಾನ ಅಲಂಕರಿಸಿದಂತಾಗುತ್ತದೆ.

ಇಬ್ಬರು ಮುಸ್ಲಿಂ, ಒಬ್ಬ ಕ್ರಿಶ್ಚಿಯನ್‌ ನಾಯಕಗೆ ಹುದ್ದೆ: ಬಿಜೆಪಿಯ ಕೇಂದ್ರೀಯ ಘಟಕದ ಪುನಾರಚನೆಯಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ಕುಲಪತಿ ತಾರೀಖ್‌ ಮನ್ಸೂರ್‌ ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಪಾಸ್ಮಾಂದ ಮುಸ್ಲಿಮರನ್ನು ಓಲೈಸುವ ಯತ್ನ ಮಾಡಲಾಗಿದೆ. ಕೇರಳದ ನಾಯಕ ಅಬ್ದುಲ್ಲಾ ಕುಟ್ಟಿಉಪಾಧ್ಯಕ್ಷರಾಗಿ ಮುಂದುವರಿದಿದ್ದು, ಇಬ್ಬರು ಮುಸ್ಲಿಮರಿಗೆ ಸ್ಥಾನ ಸಿಕ್ಕಂತಾಗಿದೆ. ಕಾಂಗ್ರೆಸ್‌ ನಾಯಕ ಎ.ಕೆ.ಆ್ಯಂಟನಿ ಪುತ್ರ ಅನಿಲ್‌ ಆ್ಯಂಟನಿಗೆ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ.

ಶಾಸಕಾಂಗ ಪಕ್ಷದ ನಾಯಕ ಸ್ಥಾನ ಯಾವ ಸಮುದಾಯಕ್ಕೆ?:  ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನವನ್ನು ಒಕ್ಕಲಿಗ ಸಮುದಾಯಕ್ಕೆ ನೀಡುವುದು ಅಂತಿಮಗೊಂಡಲ್ಲಿ ಶಾಸಕಾಂಗ ಪಕ್ಷದ ನಾಯಕ ಸ್ಥಾನವನ್ನು ಲಿಂಗಾಯತ ಸಮುದಾಯಕ್ಕೆ ನೀಡುವ ಸಂಭವ ಇದೆ. ಲಿಂಗಾಯತ ಸಮುದಾಯದಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಸನಗೌಡ ಪಾಟೀಲ ಯತ್ನಾಳ್‌, ಅರವಿಂದ್‌ ಬೆಲ್ಲದ ಅವರ ಹೆಸರುಗಳು ಪರಿಶೀಲನೆಯಲ್ಲಿವೆ. ಅದೇ ರೀತಿ ಹಿಂದುಳಿದ ವರ್ಗದಿಂದ ಮಾಜಿ ಸಚಿವ ವಿ.ಸುನೀಲ ಕುಮಾರ್‌ ಅವರ ಹೆಸರು ಸಹ ಚರ್ಚೆಯಲ್ಲಿದೆ.

CT Ravi Cook from BJP National General Secretary