ಶೃಂಗೇರಿ: ಮಲೆನಾಡಿನ ಜಲ್ವಂತ ಸಮಸ್ಯೆಗಳ ಕುರಿತು ಸಂಪೂರ್ಣವಾದ ಅರಿವು ಇದೆ.ಅಡಿಕೆಬೆಳೆಗಾರರ ಸಂಕಷ್ಟ ನೀಗಿಸಲು ಗೋರಕ್‌ಸಿಂಗ್ ವರದಿಯನ್ನು ಜಾರಿಗೆ ತರಲಾಯಿತು.ಬಳಿಕ ಬಿಜೆಪಿ ಸರಕಾರ ಬಂದು ಹತ್ತು ವರುಷವಾದರೂ ವರದಿ ಜಾರಿಗೆ ತರಲೇ ಇಲ್ಲ.ಬಿಜೆಪಿ ನಾಯಕರಿಗೆ ಅಡಿಕೆಬೆಳೆಗಾರರ ಕುರಿತು ಕಾಳಜಿ ಇಲ್ಲ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗಡೆ ತಿಳಿಸಿದರು.

ಅವರು ಶೃಂಗೇರಿ ತಾಲ್ಲೂಕಿನ ಮೆಣಸೆ ಸೊಸೈಟಿ ಸಮೀಪ ಶನಿವಾರ ಚುನವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು.

ಅಡಿಕೆಗೆ ಹೆಚ್ಚಿನ ಬೆಲೆ ಬರಲು ಕಾಂಗ್ರೆಸ್ ಸರಕಾರ ಕಾರಣವಾಗಿದೆ.ಜನಪ್ರತಿನಿಧಿಗಳು ಕ್ಷೇತ್ರಕ್ಕೆ ಬಂದರೆ ಮಾತ್ರ ಸಮಸ್ಯೆಗಳ ಕುರಿತು ಪರಿಹಾರ ನೀಡಲು ಸಾಧ್ಯವಾಗುತ್ತದೆ.ಆದರೆ ಇಲ್ಲಿನ ಸಮಸ್ಯೆಗಳು ಹಾಗೆಯೇ ಉಳಿದಿದೆ.ಯಾರು ಪೋನ್ ಮಾಡಿದರೂ ಅದಕ್ಕೆ ಸ್ಪಂದಿಸುವ ಮನೋಭಾವ ಜನಪ್ರತಿನಿಧಿಯಲ್ಲಿ ಇರಬೇಕು.ಈ ಕಾರ್ಯವನ್ನು ನಿರಂತರ ನಾನು ನಿರ್ವಹಿಸಿದ್ದೇನೆ.ಅಡಿಕೆ ಹಾಗೂ ಕಾಫಿ ಬೆಳೆಗಾರರ ಸಮಸ್ಯೆಗಳ ಕುರಿತು ಸಂಸದರು ಲೋಕಸಭೆಯಲ್ಲಿ ಪ್ರಸ್ತಾವನೆ ಮಾಡಿ ಅವರ ಪರವಾಗಿ ಧ್ವನಿ ಎತ್ತಲೇ ಇಲ್ಲ.ಹಾಗಾಗಿ ಅವರ ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದಿದೆ.ಮಲ್ಪೆಯಿಂದ ಪ್ರಾರಂಭವಾಗುವ ರಾಷ್ಟ್ರೀಯ ಹೆದ್ದಾರಿಗೆ ಅನುದಾನದ ಬಿಡುಗಡೆಗೆ ನಾನು ಹೋರಾಟ ಮಾಡಿದ್ದೇನೆ.ಆದರೆ ಅದರ ಕುರಿತು ಹಿಂದಿನ ಸಂಸದರು ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ ಎಂದು ಆರೋಪಿಸಿದರು.

ಶಿಕ್ಷಣ,ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಬೇಕಿದೆ.ಸರಕಾರಿ ಕಚೇರಿಯಲ್ಲಿ ವಿಲೇವಾರಿಯಾಗದ ಕಡತಗಳಿಗೆ ಮರುಜೀವ ನೀಡಬೇಕಿದೆ. ನಾನು ಸಂಸದನಾದ ಸಂದರ್ಭದಲ್ಲಿ ಈ ಕ್ಷೇತ್ರದಲ್ಲಿ ಮಳೆಗಾಲದಲ್ಲಿ ರಸ್ತೆಗಳು ಹಾಳಾದ ಸಂದರ್ಭದಲ್ಲಿ ಅದನ್ನು ಕಾಂಕ್ರೀಟ್ ರಸ್ತೆಯನ್ನಾಗಿಸಿದ್ದೇನೆ.ಕೇಂದ್ರಸರಕಾರ ಜನರ ಉಳಿತಾಯ ಖಾತೆಗೆ ರೂ.೧೫ಲಕ್ಷ ಹಾಗೂ ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುವ ಅಶ್ವಾಸನೆ ಕೇವಲ ಭರವಸೆಯಾಗಿ ಉಳಿದಿದೆ.ಇದರ ಕುರಿತು ಜನರು ಚರ್ಚೆ ಮಾಡಬೇಕಿದೆ.ಪೆಟ್ರೋಲ್ ಹಾಗೂ ಡಿಸೇಲ್ ದರ ಇಳಿಕೆಯಾಗುತ್ತದೆ ಎಂದು ಸರಕಾರ ಭರವಸೆ ನೀಡಿದ್ದು ಅದು ಜನಸಾಮಾನ್ಯರ ಪಾಲಿಗೆ ಮರೀಚಿಕೆಯಾಗಿ ಉಳಿದಿದೆ ಎಂದರು.

ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಅವರು ಮಾತನಾಡಿ”ಕ್ಷೇತ್ರದ ಜಲ್ವಂತ ಸಮಸ್ಯೆಗಳ ಪರಿಹಾರಕ್ಕೆ ಜಯಪ್ರಕಾಶ್ ಹೆಗಡೆ ಸಂಸದರಾದರೆ ಮಾತ್ರ ಸಾಧ್ಯ.ಬಿಜೆಪಿ ಪಕ್ಷ ದೇಶದ ಅಭಿವೃದ್ಧಿಯತ್ತ ಹೆಚ್ಚು ಗಮನ ನೀಡುತ್ತಿಲ್ಲ. ನಾನು ಬರಗಾಲಕ್ಕೆ ರೂ.ಆರವತ್ತು ಲಕ್ಷ ಅನುದಾನವನ್ನು ಕ್ಷೇತ್ರಕ್ಕಾಗಿ ಮೀಸಲಿರಿಸಿದ್ದೇವೆ.ಪ್ರಸ್ತುತ ಹತ್ತು ಕೋಟಿ ಅನುದಾನ ಕ್ಷೇತ್ರದ ಅಭಿವೃದ್ಧಿಗೆ ಬಿಡುಗಡೆ ಆಗಿದೆ.ಕಂದಾಯ ಹಾಗೂ ಅರಣ್ಯ ಇಲಾಖೆಯ ಜಂಟಿಸರ್ವೇಗೆ ಈಗಾಗಲೇ ಆದೇಶ ನೀಡಲಾಗಿದೆ.

ಜಿಲ್ಲಾಧಿಕಾರಿಗಳ ಸುಪರ್ದಿಯಲ್ಲಿ ಇರುವ ೧,೪೫,೦೦೦ ಹೆಕ್ಟೇರ್ ಪ್ರದೇಶದ ಒಳಗೆ ಕೃಷಿ ಮಾಡಿಕೊಂಡಿರುವ ರೈತರಿಗೆ ಹಕ್ಕುಪತ್ರ ನೀಡಲಾಗುವುದು.ತಾಲ್ಲೂಕಿನ ಹಲವು ಗ್ರಾ.ಪಂ ವ್ಯಾಪ್ತಿಯಲ್ಲಿ ಚುನಾವಣಾ ಬಹಿಷ್ಕಾರದ ಕೂಗು ಕೇಳುತ್ತಿದೆ.ಇದು ಸರಿಯಲ್ಲ.ಬಹಿಷ್ಕಾರದಿಂದ ಸಮಸ್ಯೆಗಳ ಪರಿಹಾರವಾಗುವುದಿಲ್ಲ. ಮೀಸಲು ಅರಣ್ಯ ರಾಜ್ಯದ ಕಾಂಗ್ರೆಸ್ ಸರಕಾರ ವಾಪಾಸ್ಸು ಪಡೆದಿದೆ ಎಂದರು

ಕೇಂದ್ರ ಸರಕಾರದ ಜನ್-ಧನ್ ಯೋಜನೆ ಸುಳ್ಳು ಯೋಜನೆಯಾಗಿದೆ.ರಾಜೀವ್ ಗಾಂಧಿ ಪ್ರಧಾನಿಯಾದ ಸಂದರ್ಭದಲ್ಲಿ ಐ.ಟಿ,ಬಿ.ಟಿ ಕಂಪೆನಿಗಳ ಅಭಿವೃದ್ಧಿ ಆಗಿದೆ.ಕೇಂದ್ರಸರಕಾರದ ಆಡಳಿತ ಚುಕ್ಕಾಣಿ ಕಾಂಗ್ರೆಸ್ ಪಕ್ಷ ಹಿಡಿದ್ದರೆ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲವನ್ನು ಮನ್ನಾ ಮಾಡಲಿದೆ ಎಂದರು.ಮೆಣಸೆ ಗ್ರಾ.ಪಂ ಅಧ್ಯಕ್ಷೆ ಸಂಧ್ಯಾಮರಿಯಪ್ಪ,ಕುತೂಗೋಡು ಗ್ರಾ.ಪಂ ಅಧ್ಯಕ್ಷ ನಾಗೇಶ್,ಕಾಂಗ್ರೆಸ್ ಮುಖಂಡರಾದ ಭಾಸ್ಕರ್ ನಾಯ್ಕ್,ಕಾನುವಳ್ಳಿ ಕೃಷ್ಣಪ್ಪಗೌಡ,ರಮೇಶ್‌ಭಟ್,ನಟರಾಜ್,ಎಚ್.ಎಂ.ಸತೀಶ್,ಸದಾಶಿವ ವಜ್ರಪ್ಪ ಮುಂತಾದವರು ಹಾಜರಿದ್ದರು.

Election campaign meeting held near Menase Society of Sringeri Taluk