ಚಿಕ್ಕಮಗಳೂರುಎಕ್ಸ್‌ಪ್ರೆಸ್: ಧರ್ಮ, ದೇಶ, ಭಾಷೆಯ ಬಗ್ಗೆ ಸ್ವಾಭಿಮಾನ ಹೊಂದಿದ್ದರೆ ಪ್ರಗತಿ, ನೆಮ್ಮದಿ ಸಾಧ್ಯ ಎಂದು ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಿಸಿದರು.

ನಗರದ ಎಂ.ಜಿ.ರಸ್ತೆ-ಶೆಟ್ಟರಬೀದಿ ತಿರುವಿನ ಶ್ರೀಪೀಠದ ನಿವೇಶನದಲ್ಲಿ ನಿರ್ಮಾಣಗೊಳ್ಳಲಿರುವ ’ಶ್ರೀಸೋಮೇಶ್ವರ ಮಹಲ್’ ಮತ್ತು ಬಸ್‌ನಿಲ್ದಾಣ ಮುಂಭಾಗದ ಉಪ್ಪಳ್ಳಿಮಠದ ಕರ್ತೃಗದ್ದುಗೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಅವರು ಆಶೀರ್ವದಿಸಿದರು.

ಜನರಲ್ಲಿ ದೇಶ, ಧರ್ಮ, ಭಾಷೆಯ ಬಗ್ಗೆ ಸ್ವಾಭಿಮಾನದ ಕೊರತೆಯಿಂದಾಗಿ ನಮ್ಮನ್ನು ಹಲವಾರು ಸಮಸ್ಯೆಗಳು ಕಾಡುತ್ತಿವೆ. ಸತ್ಯಶುದ್ಧ ತತ್ತ್ವಸಿದ್ಧಾಂತಗಳನ್ನು ಮನವರಿಕೆ ಮಾಡಿಕೊಡುವ ಅಗತ್ಯವಿದೆ. ತಂದೆ-ಮಕ್ಕಳು, ಪತಿ-ಪತ್ನಿ, ಗುರು-ಶಿಷ್ಯ ಸಂಬಂಧಗಳ ಕೊಂಡಿ ಉಳಿದಿವುದೇ ಭಾರತೀಯ ಉತ್ಕೃಷ್ಟ ಸಂಸ್ಕೃತಿ. ಋಷಿಮುನಿಗಳು, ಆಚಾರ್ಯರ ಸಂದೇಶ ನಮ್ಮನ್ನು ಜಾಗೃತಿಯತ್ತ ಕರೆದೊಯ್ದಿದೆ ಎಂದರು.

ಭಗವಂತ ಅಗೋಚರ-ಅವ್ಯಕ್ತ. ಅವ್ಯಕ್ತನಾದ ಪರಮಾತ್ಮ ಭಕ್ತರ ಕಲ್ಯಾಣಕ್ಕಾಗಿ ಗುರುರೂಪದಲ್ಲಿ ತೋರುತ್ತಾನೆ. ಜೀವಜಗತ್ತಿಗೆ ಶ್ರೀಗುರು ಸಂಜೀವಿನಿಯಾಗಿದ್ದಾನೆ. ಗುರುಭಕ್ತಿ ಇಲ್ಲದಾತನಿಗೆ ಶಿವಭಕ್ತಿ ದೊರಕದು ಎಂದ ಜಗದ್ಗುರುಗಳು, ಮನುಷ್ಯ ಜೀವನದಲ್ಲಿ ಎಷ್ಟೆಲ್ಲ ಸಾಧಿಸಬಲ್ಲ ಆದರೆ ತನ್ನೊಳಗಿರುವ ಅಜ್ಞಾನ ಅರಿಷಡ್ವರ್ಗ ಕಳೆದುಕೊಳ್ಳುವಲ್ಲಿ ಮರೆತ್ತಿದ್ದಾನೆ. ಸಂಸ್ಕಾರಯುಕ್ತ ಮೌಲ್ಯಧಾರಿತ ಜೀವನದಿಂದ ಬದುಕಿನಲ್ಲಿ ಶಾಂತಿ-ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ ಎಂದರು.

ಮಾನವ ಜೀವನದ ಉನ್ನತಿಗೆ ಗೊತ್ತು ಗುರಿಗಳಿರಬೇಕು. ಶಾಂತಿ ಮತ್ತು ಸುಖದಾಯಕ ಬದುಕಿಗೆ ನಿಜಧರ್ಮದ ಅರಿವು ಆಚರಣೆ ಅಗತ್ಯ. ಭಗವಂತ ಕೊಟ್ಟಕೊಡುಗೆಯಲ್ಲಿ ಮನುಷ್ಯ ಕಲಿಯುವ ಪಾಠಗಳಿವೆ. ಅನುಭವಿಸುವ ವಿಚಾರಧಾರೆಗಳಿವೆ. ಶ್ರೀಜಗದ್ಗುರು ರೇಣುಕಾಚಾರ್ಯರನ್ನೊಳಗೊಂಡ ಪಂಚಾಚಾರ್ಯರು ಮತ್ತು ಶ್ರೀ ಬಸವೇಶ್ವರರು ವೀರಶೈವ ಧರ್ಮ ಸಂಸ್ಕೃತಿಯ ಸಂವರ್ಧನೆಗಾಗಿ ಶ್ರಮಿಸಿದ ಮಹಾಚೇತನ. ಅವರು ತೋರಿದ ದಾರಿಯಲ್ಲಿ ಮುನ್ನಡೆದು ಜೀವನ ಸಾರ್ಥಕಪಡಿಸಿಕೊಳ್ಳಬೇಕಾಗಿದೆ ಎಂದು ರಂಭಾಪುರಿ ಜಗದ್ಗುರುಗಳು ಅಭಿಪ್ರಾಯಿಸಿದರು.

ಶಂಕರದೇವರಮಠದ ಶ್ರೀಚಂದ್ರಶೇಖರ ಶಿವಾಚಾರ್ಯರು ಮತ್ತು ಬೇರುಗಂಡಿಮಠದ ಶ್ರೀರೇಣುಕಮಹಾಂತ ಶಿವಾಚಾರ್ಯರು ಉಪಸ್ಥಿತರಿದ್ದರು.

ಗುರುವಂದನೆ ಸಲ್ಲಿಸಿದ ಶಾಸಕ ಎಚ್.ಡಿ.ತಮ್ಮಯ್ಯ ಸಮಾಜದ ಅಭಿವೃದ್ಧಿಗಾಗಿ ಜಗದ್ಗುರುಗಳ ನೇತೃತ್ವದಲ್ಲಿ ನಡೆಯುವ ಎಲ್ಲ ಸತ್ಕಾರ್ಯಗಳಿಗೆ ಸರ್ಕಾರದ ಸಹಕಾರ ಒದಗಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.

ಶ್ರೀಪೀಠದ ಕಾರ್‍ಯದರ್ಶಿ ಎಸ್.ಆರ್.ಹಿರೇಮಠ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಭು.ಎಸ್.ಕಲ್ಮಠ, ಟೌನ್‌ವೀರಶೈವ ಸಮಾಜದಅಧ್ಯಕ್ಷ ಸಿ.ಬಿ.ಮಲ್ಲೇಗೌಡ, ಉಪಾಧ್ಯಕ್ಷ ಅಶೋಕ ಮತ್ತು ಕಾರ್‍ಯದರ್ಶಿ ಜಗದೀಶ್, ಶ್ರೀಜಗದ್ಗುರು ರೇಣುಕಾಚಾರ್ಯ ಟ್ರಸ್ಟ್ ಕಾರ್ಯದರ್ಶಿ ಸಿ.ವಿ.ಮಲ್ಲಿಕಾರ್ಜುನ, ಖಜಾಂಚಿ ಯು.ಎಂ.ಬಸವರಾಜು, ಟ್ರಸ್ಟಿಗಳಾದ ದೇವಣ್ಣಗೌಡ, ಶಿವಶಂಕರ್, ಜಂಗಮಬಳಗದ ಸಂಚಾಲಕ ಪ್ರಭುಲಿಂಗಶಾಸ್ತ್ರಿ, ಪಂಚಾಚಾರ್ಯ ಸೇವಾ ಸಮಿತಿ ಅಧ್ಯಕ್ಷ ವೀರಭದ್ರಯ್ಯ, ವೀರಶೈವ ಸಹಕಾರ ಸಂಘದ ಅಧ್ಯಕ್ಷ ರಾಜಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.

Foundation stone laying of Srisomeshwara Mahal by Jagadguru of Srimadrambhapuri