ಚಿಕ್ಕಮಗಳೂರು: ಏಡ್ಸ್ ರೋಗದ ಬಗ್ಗೆ ಹಾಗೂ ಜನರು ತಮ್ಮ ಜೀವನ ಮಟ್ಟವನ್ನು ಹೇಗೆ ರೂಪಿಸಿಕೊಳ್ಳಬೇಕೆಂಬ ಕುರಿತು ಜಾಗೃತಿ ಅರಿವು ಮೂಡಿಸುವ ಸಲುವಾಗಿ ವಿಶ್ವ ಏಡ್ಸ್ ದಿನಾಚರಣೆಯ ಉದ್ದೇಶವಾಗಿದೆ ಎಂದು ನ್ಯಾಯಾದೀಶ ಎ.ಎಸ್ ಸೋಮ ತಿಳಿಸಿದರು.

ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ ಮತ್ತಿತರ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಏಡ್ಸ್ ದಿನಾಚರಣೆ ೨೦೨೩ ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಏಡ್ಸ್ ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಹಲವಾರು ಚರ್ಚೆಗಳನ್ನು ಮಾಡಿ ಈ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ ಎಂದರು.

ಪ್ರತಿಯೊಂದು ಸಮುದಾಯದವರು ಪ್ರತಿ ವಿಚಾರಗಳಲ್ಲಿ ತಮ್ಮಲ್ಲಿ ತಾವು ಅರಿವು ಮೂಡಿಸಿಕೊಂಡು ಇತರ ಜನರಿಗೆ ತಿಳಿಸುವ ಮೂಲಕ ಏಡ್ಸ್ ಬಗ್ಗೆ ಇರುವ ಅನುಮಾನದ ವಿಚಾರಗಳನ್ನು ಹಂಚಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಹಿಂದೆ ಏಡ್ಸ್ ರೋಗಿಯನ್ನು ಸಮಾಜದಿಂದ ಹೊರಗಿಟ್ಟು ಅವನನ್ನು ನೋಡುವ ರೀತಿಯೇ ಬೇರೆಯಾಗಿತ್ತು. ಮನೆಯವರಿಂದಲೇ ಶೋಷಣೆ, ದೌರ್ಜನ್ಯ ನಡೆಯುತ್ತಿತ್ತು, ಏಡ್ಸ್ ರೋಗಿ ಅನಾರೋಗ್ಯದಿಂದ ಸಾಯುವ ಬದಲು ಜನರ ಕೀಳರಿಮೆ ಮತ್ತು ಕಿರುಕುಳದಿಂದಲೇ ಮೃತಪಡುತಿದ್ದ ಎಂದು ವಿಷಾಧಿಸಿದರು.

ಸುರಕ್ಷಿತ ಲೈಂಗಿಕತೆಯಿಂದ ಏಡ್ಸ್ ರೋಗದಿಂದ ಮುಕ್ತರಾಗಬಹುದಾಗಿದೆ. ಬಡತನ, ಶಿಕ್ಷಣ ಇಲ್ಲದಿರುವ ಕಾರಣಗಳಿಂದ ದುಶ್ಚಟಗಳಿಗೆ ಬಲಿಯಾಗಿ ಅನಾರೋಗ್ಯಪೀಡಿತರಾಗುತ್ತಿದ್ದರು. ಇತ್ತೀಚೆಗೆ ವಿದ್ಯಾವಂತರಿಂದಲೇ ಇಂತಹ ಘಟನೆಗಳು ನಡೆಯುತ್ತಿರುವುದು ಬೇಸರದ ಸಂಗತಿ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಅಶ್ವಥ್‌ಬಾಬು ಮಾತನಾಡಿ ಸಮುದಾಯದಲ್ಲಿ ಏಡ್ಸ್ ಬಗ್ಗೆ ಅರಿವು ಮೂಡಿಸುವುದೇ ವಿಶ್ವ ಏಡ್ಸ್ ದಿನಾಚರಣೆಯ ಉದ್ದೇಶ. ಈ ಕುರಿತು ಶಾಲಾ ಕಾಲೇಜುಗಳಲ್ಲಿ, ಎನ್‌ಜಿಓ ಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಿ ಇದರ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಚ್‌ಐವಿ ನಿಯಂತ್ರಣ ಘಟಕದ ಜಿಲ್ಲಾ ಅನುಷ್ಠಾನಾಧಿಕಾರಿ ಹರೀಶ್‌ಬಾಬು ಮಾತನಾಡಿ ಜನರಲ್ಲಿ ಏಡ್ಸ್ ನಿಯಂತ್ರಣದ ಕುರಿತು ಅರಿವು ಮೂಡಿಸಲು ಡಿ.೧ ರಂದು ವಿಶ್ವದಾದ್ಯಂತ ಏಡ್ಸ್ ದಿನ ಆಚರಿಸಲಾಗುತ್ತಿದೆ. ಸಮುದಾಯಗಳು ಮುನ್ನಡೆಸಲಿ ಎಂಬ ಘೋಷ ವಾಕ್ಯದೊಂದಿಗೆ ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತಿದೆ ಎಂದರು.

ಸಮುದಾಯಗಳು ಜವಾಬ್ದಾರಿಯನ್ನು ತೆಗೆದುಕೊಂಡು ಮುನ್ನಡೆಸಿದಲ್ಲಿ ಮಾತ್ರ ಎಚ್‌ಐವಿ ನಿಯಂತ್ರಿಸಲು ಸಾಧ್ಯ ಎಂದು ಆರೋಗ್ಯ ಇಲಾಖೆಗಳು, ಸಂಘ-ಸಂಸ್ಥೆಗಳು ಶ್ರಮಿಸುತ್ತಿವೆ. ಈ ಮೂಲಕ ನೀಡುವ ಮಾಹಿತಿ ಹಾಗೂ ಸೇವೆಗಳನ್ನು ಸಮುದಾಯದ ಸದಸ್ಯರು ಪಡೆದುಕೊಂಡು ಸಮಾಜವನ್ನು ಏಡ್ಸ್ ಮುಕ್ತವಾಗಿಸುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ತಿಳಿಸಿದರು.

ಪ್ರಾಸ್ತಾವಿಕವಾಗಿ ರಾಜುನರಸಯ್ಯ ಮಾತನಾಡಿದರು. ಆಯುಷ್ ಅಧಿಕಾರಿ ಡಾ|| ಗೀತಾ, ಡಾ|| ಬಾಲಕೃಷ್ಣ, ಡಾ|| ಶಿವರಾಜ್, ಡಾ|| ಶ್ರೀನಿವಾಸ್, ಶ್ರೀಮತಿ ತೇಜಸ್ವಿನಿ ಮತ್ತಿತರರಿದ್ದರು. ಪ್ರಾರಂಭದಲ್ಲಿ ಜಲಜಾಕ್ಷಿ ಸ್ವಾಗತಿಸಿದರು.

Program for World AIDS Day 2023