ನವದೆಹಲಿ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯಗಳಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿ ಭರ್ಜರಿ ಗೆಲುವು ದಾಖಲಿಸಿದ್ದ ಟೀಮ್ ಇಂಡಿಯಾವನ್ನು ಈ ಬಾರಿಯ ಕಪ್ ಗೆಲ್ಲುವ ನೆಚ್ಚಿನ ತಂಡ ಎಂದೇ ಪರಿಗಣಿಸಲಾಗಿತ್ತು. ಆದರೆ ಟೂರ್ನಿಯ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿರುವುದು ಅಭಿಮಾನಿಗಳಲ್ಲಿ ನಿರಾಸೆಗೆ ಕಾರಣವಾಗಿತ್ತು.

ಮುಂದಿನ ಪಂದ್ಯಗಳಲ್ಲೂ ಇಂಥದ್ದೇ ನೀರಸ ಪ್ರದರ್ಶನ ತೋರಿದರೆ ಕಷ್ಟವಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಶ್ಲೇಷಿಸಿದ್ದರು. ಆದರೆ ಮಾಜಿ ಕ್ರಿಕೆಟಿಗ, ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಹೇಳುವುದೇ ಬೇರೆ!

ಪಾಕಿಸ್ತಾನದ ವಿರುದ್ಧ ಹೀನಾಯ ಸೋಲಿನ ಹೊರತಾಗಿಯೂ ಟೀಮ್ ಇಂಡಿಯಾ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದು ಸೆಹ್ವಾಗ್ ಹೇಳಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಸಹ ಆಟಗಾರರ ಮೇಲೆ ನನಗೆ ಪೂರ್ಣ ನಂಬಿಕೆ ಇದೆ ಎಂದು ಅವರು ಹೇಳಿದ್ದಾರೆ.

ವೀರೂಗಿರಿ ಎಂಬ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನನ್ನ ಪ್ರಕಾರ ಈ ಬಾರಿ ಟೀಮ್ ಇಂಡಿಯಾ ಟ್ವೆಂಟಿ-20 ವಿಶ್ವಕಪ್ ಗೆಲ್ಲಲಿದೆ. ಆದರೆ, ಟೂರ್ನಿಯುದ್ದಕ್ಕೂ ಇನ್ನು ಮುಂದೆ ಉತ್ತಮ ಕ್ರಿಕೆಟ್ ಆಡಬೇಕಿದೆ. ಗೆದ್ದಾಗ ತಂಡವನ್ನು ಹುರಿದುಂಬಿಸುತ್ತೇವೆ ನಿಜ. ಆದರೆ ಸೋತ ಸಂದರ್ಭದಲ್ಲಿ ಅದಕ್ಕಿಂತಲೂ ಹೆಚ್ಚು ಬೆಂಬಲ ನೀಡಬೇಕು’ ಎಂದು ಹೇಳಿದ್ದಾರೆ.

 

View this post on Instagram

 

A post shared by Virender Sehwag (@virendersehwag)


ಅತ್ತ ಪಾಕಿಸ್ತಾನ ತಂಡವು ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿದೆ. ಹೀಗಾಗಿ ಈ ಬಾರಿ ಆ ತಂಡವು ಸೆಮಿಫೈನಲ್ ಪ್ರವೇಶಿಸುವುದು ಖಂಡಿತ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಭಾರತವು ಅಕ್ಟೋಬರ್ 31ರಂದು ನ್ಯೂಜಿಲೆಂಡ್ ವಿರುದ್ಧ ತನ್ನ ಎರಡನೇ ಪಂದ್ಯ ಆಡಲಿದೆ.

ಇನ್ನಷ್ಟು ಸುದ್ದಿಗಳು…

ICC T20 World Cup: ಭಾರತ–ಪಾಕಿಸ್ತಾನ ಕ್ರಿಕೆಟ್ ಪಂದ್ಯ ರಾಷ್ಟ್ರ ಧರ್ಮಕ್ಕೆ ವಿರುದ್ಧ ಎಂದ ರಾಮ್‌ದೇವ್

Bollywood: ಜಾನ್ಹವಿ ಕಪೂರ್​ಳನ್ನು ಸುಸ್ತು ಮಾಡಿದ ಚಿತ್ರವಿದು…

ಮತ್ತೆ ಸಿನಿಮಾ ಮಾಡುತ್ತಿರುವ ಯಾಮಿ ಗೌತಮ್-ಆದಿತ್ಯ ಧರ್: ಹೆಂಡತಿ ನಟಿ, ಗಂಡ ನಿರ್ದೇಶಕ