ಚಿಕ್ಕಮಗಳೂರು: : ನರ್ಸಿಂಗ್ ಸೇವೆಯಲ್ಲಿ ಸಮರ್ಪಣೆ ಮತ್ತು ಪ್ರಾಮಾಣಿಕತೆ ಅತೀ ಮುಖ್ಯ ಎಂದು ಗೌತಮ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಅಧ್ಯಕ್ಷ ಡಾ. ಎಟಿಎಎಸ್ ಗಿರಿ ತಿಳಿಸಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ವಿಧ್ಯಾರ್ಥಿ ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ತರಗತಿಗಳ ಆರಂಭೋತ್ಸವ ಸಮಾರಂಭದಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಪರಿಸರವು ಶಿಸ್ತು, ಸೃಜನಶೀಲಕೆ ಮತ್ತು ಸೂಕ್ಷ್ಮ ಮನೋಭಾವನೆಯನ್ನು ಅಪೇಕ್ಷಿಸುತ್ತದೆ. ವಿದ್ಯಾರ್ಥಿಗಳು ಪಾಠ, ಪ್ರವಚನಗಳ ಜೊತೆಗೆ ಇತರೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ದಾದಿಯರು ಪುಸ್ತಕದಲ್ಲಿರುವ ಪಾಠಗಳನ್ನು ಓದುವ ಜೊತೆ ತಮ್ಮ ವೃತ್ತಿಯನ್ನು ಮೊದಲು ಪ್ರೀತಿಸಬೇಕು. ಆಗ ಮಾತ್ರ ತಮ್ಮ ಗುರಿಯನ್ನು ಸಾಧಿಸಲು ಸಾಧ್ಯ ಎಂದರು.

ರೋಗಿಗಳೊಂದಿಗೆ ಅತ್ಯಂತ ಸಹನೆಯಿಂದ ವರ್ತಿಸಬೇಕು. ದಾದಿಯರು ಆಸ್ಪತ್ರೆಯ ತಾಯಿ ಇದ್ದಂತೆ. ಬಹುತೇಕ ರೋಗಿಗಳ ಆರೋಗ್ಯ ಪರಿಸ್ಥಿತಿ ಬಗ್ಗೆ ಅವರ ಪೋಷಕರು ವೈದ್ಯರಿಗಿಂತಲೂ ಹೆಚ್ಚಾಗಿ ದಾದಿಯರನ್ನೇ ಪ್ರಶ್ನಿಸುತ್ತಾರೆ. ಇಂತಹ ಸಂದರ್ಭದಲ್ಲಿ ಅವರ ಪ್ರಶ್ನೆಗಳಿಗೆ ಉತ್ತರಿಸುವುದಷ್ಟೇ ಅಲ್ಲ. ಅವರಿಗೆ ಪರಿಸ್ಥಿತಿಯ ಬಗ್ಗೆ ಸಮಾಧಾನವಾಗಿ ಮನವರಿಕೆ ಮಾಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.

ನಗರದ ಕೆಆರ್‌ಎಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಟಿ.ಆರ್.ಶ್ರೀಧರ್ ಮಾತನಾಡಿ, ನರ್ಸಿಂಗ್ ಸೇವೆ ಬಗ್ಗೆ ಮೊದಲು ವಿದ್ಯಾರ್ಥಿಗಳು ಹೆಮ್ಮೆ ಪಡಬೇಕು. ಪ್ರತಿ ಉದ್ಯೋಗಕ್ಕೂ ಅದರದ್ದೇ ಆದ ವಿಶಿಷ್ಠತೆ ಇರುತ್ತದೆ. ಸೇವೆಯೇ ಪ್ರಾಮುಖ್ಯತೆ ಹೊಂದಿದ ಕ್ಷೇತ್ರ ಇದಾಗಿರುತ್ತದೆ. ಕೇವಲ ಹಣದಿಂದಲೇ ಸೇವೆಯನ್ನು ಅಳೆಯಲು ಆಗುವುದಿಲ್ಲ. ರಾತ್ರಿ, ಬೆಳಗು ಎನ್ನದೆ ಈ ಕ್ಷೇತ್ರದಲ್ಲಿ ಸೇವೆಗೆ ಆಧ್ಯತೆ ನೀಡಬೇಕು ಎಂದರು.

ಪ್ರತಿ ರೋಗಿಗಳಿಗೂ ಅವರ ತಾಳ್ಮೆ, ಕುಟುಂಬದ ಹಿನ್ನೆಲೆ, ಆರ್ಥಿಕ ಪರಿಸ್ಥಿತಿ ಎಲ್ಲವೂ ಬೇರೆ ಬೇರೆ ಆಗಿರುತ್ತದೆ. ಈ ಕಾರಣಕ್ಕೆ ಪ್ರತಿ ರೋಗಿಗೆ ಸೇವೆ ಸಲ್ಲಿಸುವಾಗಲು ಅವರನ್ನು ಪೂರ್ಣ ಪ್ರಮಾಣದಲ್ಲಿ ಅರ್ಥಮಾಡಿಕೊಂಡು ನಿಗಾ ವಹಿಸಿದಾಗ ಸೇವೆಗೆ ಅರ್ಥ ಬರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್‌ನ ಅಧ್ಯಕ್ಷ ಸಿ.ಎಚ್.ಇಂದು ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ತೇಜ ಸ್ವಾಗತಿಸಿದರು.

Inauguration of classes of Student Nursing College