ಚಿಕ್ಕಮಗಳೂರು: ದೇಶದ ವಿವಿಧ ರಾಜ್ಯಗಳಲ್ಲಿ ಆ ರಾಜ್ಯದ ಕ್ರೀಡಾಪಟುಗಳು ಪ್ಯಾರಾ ಏಷ್ಯಾಡ್‌ನಲ್ಲಿ ವಿಜೇತರಾಗಿ ಪದಕಗಳಿಸಿದವರನ್ನು ಅಭೂತಪೂರ್ವ ಸ್ವಾಗತ ನೀಡಿ ಗೌರವಿಸುತ್ತಾರೆ ಆದರೆ ರಾಜ್ಯದಲ್ಲಿ ಇದಾವುದೂ ನಡೆಯದೆ ಕ್ರೀಡಾಪಟುಗಳಿಗೆ ಅವಮಾನ ಮಾಡಿದ್ದಾರೆ ಎಂದು ಆಶಾಕಿರಣ ಅಂಧ ಮಕ್ಕಳ ಪಾಠಶಾಲೆ ಅಧ್ಯಕ್ಷ ಹಾಗೂ ಕ್ಯಾತ ಮಕ್ಕಳ ವೈದ್ಯ ಜೆ.ಪಿ ಕೃಷ್ಣೇಗೌಡ ಆರೋಪಿಸಿದ್ದಾರೆ.

ಅವರು ಇಂದು ಲೈಫ್‌ಲೈನ್ ಸಂಸ್ಥೆವತಿಯಿಂದ ಚಿನ್ನದ ಪದಕ ಪಡೆದ ರಕ್ಷಿತರಾಜು. ಬೆಳ್ಳಿಪದಕ ವಿಜೇತರಾದ ರಾಧ, ರಾಜು, ಲಲಿತ ಇವರುಗಳಿಗೆ ಸನ್ಮಾನಿಸಿ ಮಾತನಾಡಿದರು.

ಸಾರ್ವಜನಿಕರಿಂದ ವಂತಿಕೆ ಸಂಗ್ರಹಿಸಿ ಅವರಿಗೆ ಗೌರವ ಸಮರ್ಪಣೆ ಮಾಡಿದ್ದೇವೆ. ರಾಜ್ಯ ಸರ್ಕಾರ ಈವರೆಗೆ ಇವರಿಗೆ ಯಾವುದೇ ರೀತಿ ಗೌರವ, ಸನ್ಮಾನ ಮಾಡಿಲ್ಲ ಎಂದು ವಿಷಾಧಿಸಿದರು.

ಇಡೀ ಕರ್ನಾಟಕದ ಇತಿಹಾಸದಲ್ಲಿ ದಿವ್ಯಾಂಗರಿಗೆ ಏಕಲವ್ಯ ಪ್ರಶಸ್ತಿ ಕೊಟ್ಟಿರುವುದು ಸವೂರ್‌ಗೆ, ರಾಧಾ ಅಂಧರ ವಿಶ್ವಕಪ್ ಕ್ರಿಕೆಟ್ ತಂಡದ ನಾಯಕ ಅನಿಲ್ ರಮೇಶ್ ಇವರಿಗೆ ಕೇಂದ್ರ ಸರ್ಕಾರ ಸನ್ಮಾನ ಮಾಡಿ ಗೌರವಿಸಿದೆ ಎಂದು ಶ್ಲಾಘಿಸಿದರು.

ಚೆಸ್, ಯೋಗ, ಕರಾಟೆ, ಬುಟ್ಟಿ ಹೆಣೆಯುತ್ತಾರೆ. ಎಲ್ಲಾ ರೀತಿಯ ಕೆಲಸ ಮಾಡಿ ತೋರಿಸಿದ್ದಾರೆ. ಕಣ್ಣಿನ ಅವಶ್ಯಕತೆ ಮುಖ್ಯ ಅಲ್ಲ ಸಾಧನೆ ಮಾಡಬೇಕೆಂಬ ಧ್ಯೇಯ ಮುಖ್ಯ ಅನಿಲ್‌ರಮೇಶ್‌ರಂತಹವರಿಗೆ ಪ್ರೋತ್ಸಾಹ ಅಗತ್ಯ ಎಂದರು.

ಒಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಬೇಕೆಂಬ ಅವರ ಕನಸು ನನಸಾಗಲಿ ಎಂದು ಶುಭ ಹಾರೈಸಿದರು. ನಮ್ಮೆಲ್ಲರ ಪ್ರೀತಿ ವಿಶ್ವಾಸ ಈ ಕ್ರೀಡಾಪಟುಗಳಿಗೆ ರಕ್ಷಾಕವಚವಾಗಲಿ ಎಂದು ಹೇಳಿದರು.

ಈ ಮಕ್ಕಳ ಸಂಪೂರ್ಣ ಖರ್ಚು ವೆಚ್ಚವನ್ನು ಲೈಫ್ ಲೈನ್ ಸಂಸ್ಥೆಯ ಕಿಶೋರ್ ಕುಮಾರ್ ಹೆಗ್ಗಡೆ ರವರು ತೆಗೆದುಕೊಂಡು ಈ ಕ್ರೀಡಾಪಟುಗಳ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು.

ಲೈಫ್‌ಲೈನ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಕುಮಾರ್ ಹೆಗಡೆ ಮಾತನಾಡಿ ಈ ನಾಲ್ಕು ಕ್ರೀಡಾಪಟುಗಳ ಸಾಧನೆ ಅವಿಸ್ಮರಣೀಯವಾಗಿದ್ದು, ಈ ಕ್ರೀಡಾಪಟುಗಳ ಸಂಪೂರ್ಣ ಖರ್ಚು ವೆಚ್ಚವನ್ನು ನಮ್ಮ ಸಂಸ್ಥೆವತಿಯಿಂದ ನೋಡಿಕೊಳ್ಳುತ್ತೇವೆ ‘ ಆಧಾಯ ತೆರಿಗೆ ಅಧಿಕಾರಿಗಳು ಇದನ್ನು ಖರ್ಚುವೆಚ್ಚ ಎಂದು ತೀರ್ಮಾನಿಸಿದರೆ ತೊಂದರೆ ಇಲ್ಲ ಆದರೆ ೧ ಲಕ್ಷರೂ ದೇಣಿಗೆ ನೀಡಿದರೆ ೩೫ ಸಾವಿರ ರೂ ತೆರಿಗೆ ಪಾವತಿಸಬೇಕೆಂಬ ನಿಯಮ ಇದೆ ಎಂದು ಮಾಹಿತಿ ನೀಡಿದರು.

ಅನವಶ್ಯಕ ಖರ್ಚುಗಳಿಗೆ ಕಡಿವಾಣಾ ಹಾಕಿ ಈ ರೀತಿಯ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವುದು ಬಹಳ ಮುಖ್ಯ ಎಂದು ಭಾವಿಸಿದ್ದೇನೆ ಆರ್ಥಿಕ ವ್ಯವಸ್ಥೆ ಸುಗಮವಾದಾಗ ಮಾತ್ರ ಆ ಕುಟುಂಬ ಚೆನ್ನಾಗಿರುತ್ತದೆ ಇಲ್ಲವಾದರೆ ಹೊಡೆದಾಟ, ಬಡಿದಾಟ ಪ್ರಾರಂಭವಾಗುತ್ತದೆ. ಕೆಲವು ದೇಶಗಳಲ್ಲಿ ಇಂದು ನಾವು ಅಸ್ತಿರತೆ ಕಾಣುತ್ತಿದ್ದೇವೆ. ನಾವು ಹೆಚ್ಚು ತೆರಿಗೆ ಪಾವತಿಸಿದಾಗ ದೇಶ ಸುಸ್ತಿರವಾಗಿರುತ್ತದೆ ಇದರಿಂದ ಆಸ್ಪತ್ರೆ, ರಸ್ತೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತದೆ ಎಂದರು.

ಮಕ್ಕಳಿಗೆ ನಾನಾ ರೀತಿಯ ಕ್ರೀಡಾಕೂಟ ನಡೆಸುವ ಮೂಲಕ ಅವರ ಬೌದ್ದಿಕ ಬೆಳವಣಿಗೆಗೆ ಪೂರಕವಾಗುತ್ತದೆ. ಈ ನಿಟ್ಟಿನಲ್ಲಿ ಈ ಮಕ್ಕಳ ಸಂಪೂರ್ಣ ವೆಚ್ಚ ಭರಿಸಲು ಮುಂದಾಗಿದ್ದೇನೆ ಎಂದು ಹೇಳಿದರು.ಪ್ರಾಸ್ತಾವಿಕವಾಗಿ ದೀಪಕ್ ದೊಡ್ಡಯ್ಯ ಮಾತನಾಡಿದರು, ಸಿಬ್ಬಂದಿ ತೇಜಸ್ ಸ್ವಾಗತಿಸಿದರು.

Shame on Para Asiad medalists in the state