ಚಿಕ್ಕಮಗಳೂರು: ಕ್ಷೇತ್ರದಲ್ಲಿ ಸೂರಿಲ್ಲದವರಿಗೆ ನಿವೇಶನ ನೀಡಿ ಮನೆ ನಿರ್ಮಿಸಿಕೊಡಲು ಪ್ರತಿ ಗ್ರಾಮಪಂಚಾಯಿತಿಯಲ್ಲೂ ಎರಡು ಎಕರೆ ಜಾಗ ಗುರುತಿಸುವಂತೆ ಅಕಾರಿಗಳಿಗೆ ಸೂಚಿಸಿದ್ದೇವೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ನಗರದ ವಾರ್ಡ್ ನಂ.೧೨ರ ಟಿಪ್ಪು ನಗರದಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ ನಿವೇಶನ,ಮನೆಯಿಲ್ಲದ ಅರ್ಹ ಫಲಾನುಭವಿಗಳಿಗೆ ಮನೆ ನಿವೇಶನ ನೀಡಲು ಪ್ರತಿ ಪಂಚಾಯಿತಿಯಲ್ಲೂ ೨ ಎಕರೆ ಜಾಗ ಗುರುತು ಮಾಡಲು ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸೂಚನೆ ನೀಡಲಾಗಿದೆ.ಬಡವರ ಬದುಕಿನ ಬಗ್ಗೆ ಕಾಳಜಿ ಇರುವ ಸರಕಾರ ನಮ್ಮದು. ಈರಾಜ್ಯದ ಜನರ ಋಣ ತೀರಿಸುವ ಕೆಲಸ ಮಾಡುತ್ತೇವೆ ಎಂದರು.

ಸರಕಾರಿ ಶಾಲೆ, ಅಂಗನವಾಡಿಗಳಲ್ಲಿ ಕಲಿಯುವರು ಬಹುತೇಕ ಬಡವರ ಮಕ್ಕಳೇ. ಅವರ ಕಲಿಕೆಗೆ ಸುಸಜ್ಜಿತ ಸೂರು ಒದಗಿಸಬೇಕು ಎಂಬ ಸದುದ್ದೇಶದಿಂದ ನಮ್ಮ ಸರಕಾರ ನಗರದ ಐದು ಅಂಗನವಾಡಿಗಳಿಗೆ ೧.೪೦ ಕೋಟಿ ರೂ.ಅನುದಾನ ನೀಡಿದೆ.೨ ಅಂಗನವಾಡಿ ಕಟ್ಟಡಗಳ ಉದ್ಘಾಟನೆ ಮತ್ತು ೫ ಅಂಗನವಾಡಿ ಕಟ್ಟಡಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡವರ, ದಲಿತರ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಪರವಾದ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.ಏಷ್ಯಾದಲ್ಲೇ ಹೆಣ್ಣುಮಕ್ಕಳಿಗಾಗಿ ವಿಶೇಷ ಯೋಜನೆಯನ್ನು ತಂದವರಲ್ಲಿ ಸಿದ್ದರಾಮಯ್ಯ ಮೊದಲಿಗರು.ಗೃಹ ಲಕ್ಷ್ಮಿ ಮತ್ತು ಶಕ್ತಿ ಯೋಜನೆಗಳಿಗೆ ೩೦೬೦೦ ಕೋಟಿ ರೂ ವೆಚ್ಚ ಮಾಡುತ್ತಿದೆ ನಮ್ಮ ಸರಕಾರ ಎಂದರು.

ಕುಟುಂಬವನ್ನು ನಿರ್ವಹಣೆ ಮಾಡುವ ಜವಾಬ್ದಾರಿ ಹೆಣ್ಣು ಮಕ್ಕಳ ಮೇಲಿದೆ. ಸಿಲಿಂಡರ್ ದರ ಏರಿಕೆ, ದಿನಸಿ ಮತ್ತಿತರೆ ಗ್ರಹೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ಹೆಣ್ಣುಮಕ್ಕಳಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದರು.೮ ಲಕ್ಷ ವಾರ್ಷಿಕ ವರಮಾನ ಮೀರದ ಎಲ್ಲ ವರ್ಗದ ಮಹಿಳೆಯರಿಗೂ ಈ ಸೌಲಭ್ಯ ದೊರೆಯಲಿದೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ, ನಗರಸಭೆ ಆಯುಕ್ತ ಬಸವರಾಜು, ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ನಗರಸಭೆ ಸದಸ್ಯ ಸೈಯದ್ ಜಾವಿದ್, ಮುಖಂಡರಾದ ಸಿಡಿಪಿಓ ಚರಣ್‌ರಾಜ್ ಮತ್ತಿತರರಿದ್ದರು.

Inauguration of new Anganwadi Center in Tipu Nagar Ward No.12