ಚಿಕ್ಕಮಗಳೂರು: ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದಿಂದ ೩೭೦, ಎನ್‌ಡಿಎ ಸೇರಿ ೫೦೦ ಸೀಟು ಗೆದ್ದು ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಬಿಜೆಪಿ ರಾಜ್ಯ ವಕ್ತಾರ ಮೋಹನ್‌ವಿಶ್ವ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾಳೆ ರಾಜ್ಯಕ್ಕೆ ಗೃಹಸಚಿವ ಅಮಿತಾ ಶಾ ಬರಲಿದ್ದಾರೆ. ದೊಡ್ಡಮಟ್ಟದ ಚುನಾವಣಾ ರ್‍ಯಾಲಿಗಳು ನಡೆಯಲಿವೆ. ಕಳೆದ ೧೦ ವರ್ಷದ ಬಿಜೆಪಿ ಆಡಳಿತದ ಅವಧಿಯಲ್ಲಿ ೬೦ ವರ್ಷ ಆಗದ ಸಮಸ್ಯೆಯನ್ನು ಪರಿಹರಿಸಲಾಗಿದೆ. ಪ್ರಧಾನಿ ಮೋದಿ ದೇಶವನ್ನು ೫ನೇ ಆರ್ಥಿಕತೆಗೆ ತಂದಿದ್ದಾರೆ. ೨೦೨೭ ರ ಹೊತ್ತಿಗೆ ದೇಶವನ್ನು ೩ ನೇ ಆರ್ಥಿಕತೆಗೆ ತೆಗೆದುಕೊಂಡು ಹೋಗಲಿದ್ದಾರೆ. ದೇಶ ವಿಶ್ವಗುರು ಆಗಲಿದೆ ಎಂದು ಬಣ್ಣಿಸಿದರು.

ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ, ಮಹಿಳಾ ಶೌಚಾಲಯ ನಿರ್ಮಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಹೆಚ್ಛು ಒತ್ತು ನೀಡಲಾಗಿದೆ. ಪ್ರಧಾನಿ ಮೋದಿ ಅವರು ೪ ಸಮುದಾಯಗಳನ್ನು ಗುರಿಯಾಗಿಸಿಕೊಂಡು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಬಿಜೆಪಿ ಅದಾನಿ, ಅಂಬಾನಿಗಳಂತಹ ಉದ್ಯಮಿಗಳ ಪರ ಎಂದು ಕಾಂಗ್ರೆಸ್ ಟೀಕಿಸುತ್ತದೆ. ಇಂತಹ ಬಡವರ ಪರವಾದ ಯೋಜನೆಗಳು ಕಾಂಗ್ರೆಸ್ ಕಣ್ಣಿಗೆ ಕಾಣಿಸುವುದೇ ಇಲ್ಲ ಎಂದು ಆರೋಪಿಸಿದರು.

ಇಂಡಿಯಾ ಒಕ್ಕೂಟಕ್ಕೆ ಈವರೆಗೆ ತನ್ನ ನಾಯಕ ಯಾರು ಎಂದು ಗುರುತು ಮಾಡಲಾಗಿಲ್ಲ. ಇಂಡಿಯಾದ ಕೆಲವು ನಾಯಕರು ತಮ್ಮ ರಾಜ್ಯದಲ್ಲಿ ಪೂರ್ಣ ಸ್ಥಾನಗಳನ್ನು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದಾರೆ ಎಂದರು.

ಕಳೆದ ೧೦ ವರ್ಷದಲ್ಲಿ ಅಮೂಲಾಗ್ರ ಬದಲಾವಣೆ ಆಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲೂ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುತ್ತೇವೆ ಎಂದು ಹೇಳಿದರು.

ಬಿಜೆಪಿ ಮುಖಂಡ ಸಿ.ಎಚ್ ಲೋಕೇಶ್ ಮಾತನಾಡಿ ಕಾಂಗ್ರೆಸ್ ಸರಕಾರ ಪೊಲೀಸರ ಮೂಲಕ ಬಿಜೆಪಿ ಮತ್ತು ಬಜರಂಗದಳ ಕಾರ್ಯಕರ್ತರನ್ನು ಬೆದರಿಸುವ ಕೆಲಸ ಮಾಡುತ್ತಿದೆ. ಬಾಂಡ್ ಕೊಡಿ ಎಂದು ಪೊಲೀಸರು ಕೇಳುತ್ತಾರೆ. ಇಂತಹ ದಮನಕಾರಿ ನೀತಿಯನ್ನು ಕೂಡಲೇ ಕಾಂಗ್ರೆಸ್ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮಧುಕುಮಾರ್‌ರಾಜ್ ಅರಸ್, ಮಹೇಶ್‌ಒಡೆಯರ್, ಹೆಚ್.ಎಸ್ ಪುಟ್ಟಸ್ವಾಮಿ, ವಿಜೇಂದ್ರ ಮತ್ತಿತರರಿದ್ದರು.

It is certain that BJP will come to power on its own