ಚಿಕ್ಕಮಗಳೂರು: ಬಿಜೆಪಿಯವರ ಟೀಕೆಗಳು ರಚನಾತ್ಮಕವಾಗಿರಬೇಕು, ಮಿತಿಮೀರಿದರೆ ನಮ್ಮ ಬತ್ತಳಿಕೆಯಲ್ಲೂ ಬಾಣಗಳಿವೆ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಎಚ್ಚರಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಬಿಜೆಪಿ ನಾಯಕರು ಕಾಂಗ್ರೆಸ್ ಉಗ್ರಗಾಮಿಗಳ ತಾಣ ಎಂದು ಹೇಳಿದ್ದಾರೆ. ಹಾಗಿದ್ದರೆ ಅವರದ್ದೇ ಆಗಿರುವ ಕೇಂದ್ರ ಸರಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.

ಬಿಜೆಪಿಯವರು ಲಂಗುಲಗಾಮಿಲ್ಲದೆ ಮಾತಾಡುವುದನ್ನು ನಿಲ್ಲಿಸಬೇಕು.ಇಲ್ಲದಿದ್ದರೆ ಅವರ ಧಾಟಿಯಲ್ಲೇ ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು ಟೀಕೆಗಳು ರಚನಾತ್ಮಕವಾಗಿರಬೇಕು. ವೈಯಕ್ತಿಕ ನಿಂಧನೆ ಯಾರೇ ಆಗಲಿ ಮಾಡಬಾರದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ೧೦ ವರ್ಷ ಸಂಸದರಾಗಿದ್ದ ಶೋಭಾಕರಂದ್ಲಾಜೆ ಅವರ ಕೊಡುಗೆ ಜಿಲ್ಲೆಗೆ ಏನು ಎಂದು ಪ್ರಶ್ನಿಸಿ ಜಿಲ್ಲೆಗೆ ಯಾವುದೇ ಯೋಜನೆ ತರಲಿಲ್ಲ. ಜನಪರ ಕೆಲಸ ಮಾಡಲಿಲ್ಲ. ಜಿಲ್ಲೆಯಲ್ಲಿ ಅಡಕೆ, ಕಾಫಿ ಸೇರಿದಂತೆ ಅನೇಕ ಸಮಸ್ಯೆಗಳಿವೆ ಆ ಬಗ್ಗೆ ಚಕಾರ ಎತ್ತದೆ ಭಾವನಾತ್ಮಕ ವಿಚಾರದಲ್ಲಿ ರಾದ್ಧಂತ ಮಾಡಿ ಸ್ವಪಕ್ಷೀಯರಿಂದಲೇ ಗೋಬ್ಯಾಕ್ ಚಳವಳಿ ಎದುರಿಸಿ ಪಲಾಯನ ಮಾಡಬೇಕಾಯಿತು ಎಂದು ಟೀಕಿಸಿದರು.

ರಾಜ್ಯದಲ್ಲಿ ಬಿಜೆಪಿ ಛಿದ್ರವಾಗಿದೆ. ಭಿನ್ನಾಭಿಪ್ರಾಯ ಭುಗಿಲೆದ್ದಿರುವುದಕ್ಕೆ ಕೆ.ಎಸ್.ಈಶ್ವರಪ್ಪ, ಮಾಧುಸ್ವಾಮಿ, ಪ್ರತಾಪ್ ಸಿಂಹ ಅವರೆ ನಿದರ್ಶನವಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಈ ಬಾರಿ ಚುನಾವಣೆಯಲ್ಲಿ ೨೦ ಸ್ಥಾನ ಗೆಲ್ಲಲಿದೆ. ಏ.೩ ರಂದು ನಮ್ಮ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಿದರು.

ಪ್ರಶ್ನೆಯೊಂದಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕೋಮುವಾದಿಗಳ ಜತೆ ಕೈಜೋಡಿಸಿದ್ದು ಜಾತ್ಯಾತೀತ ಹೆಸರಿಗೆ ಕಳಂಕ ಎಂದು ಉತ್ತರಿಸಿದರು.

ಇನ್ನೋರ್ವ ವಕ್ತಾರ ರವೀಶ್ ಬಸಪ್ಪ ಮಾತನಾಡಿ, ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರು ಇದು ದೇಶಪ್ರೇಮಿಗಳು ಮತ್ತು ದೇಶ ದ್ರೋಹಿಗಳ ನಡುವಿನ ಚುನಾವಣೆ ಎಂದಿದ್ದಾರೆ. ಈ ದೇಶದ ಸಾರ್ವಜನಿಕ ಆಸ್ತಿ ಮಾರಿದವರು, ಎಲ್‌ಐಸಿ ಮಾರಿದವರು, ಚುನಾವಣಾ ಬಾಂಡ್ ಹೆಸರಲ್ಲಿ ಕೋಟ್ಯಂತರ ರೂ. ಲೂಟಿ ಮಾಡಿದವರು ದೇಶ ಪ್ರೇಮಿಗಳಾ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಸಿ.ಟಿ.ರವಿ ಲೋಕಾಸಭೆ ಚುನಾವಣೆ ನಂತರ ಕಾಂಗ್ರೆಸ್ ಸರಕಾರ ಇರುವುದಿಲ್ಲ ಎಂದಿದ್ದಾರೆ. ಅವರಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗುವುದೆ ದುರ್ಲಭವಾಗಿದೆ. ಅವರ ಅಸ್ತಿತ್ವ ಮೊದಲು ಉಳಿಸಿಕೊಂಡು ಇತರರ ಬಗ್ಗೆ ಮಾತಾಡಲಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಎಂ.ಡಿ ರಮೇಶ್, ಹಿರೇಮಗಳೂರು ರಾಮಚಂದ್ರ, ಡಿ.ಸಿ ಪುಟ್ಟೇಗೌಡ, ಜಯರಾಜ್ ಅರಸ್ ಇದ್ದರು.

BJP’s criticism should be constructive