ಚಿಕ್ಕಮಗಳೂರು: ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಕೇಂದ್ರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನಾಡೋಜ ಡಾ.ಮಹೇಶ್ ಜೋಶಿ ಹಾಗೂ ಜಿಲ್ಲಾ ಅಧ್ಯಕ್ಷರಾಗಿ ಸೂರಿ ಶ್ರೀನಿವಾಸ್ ಅವರನ್ನು ಹೆಲ್ಲಿಸುವ ಮೂಲಕ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಗೆದ್ದು ಬೀಗಿದೆ ಎಂದು ಪರಾಜಿತ ಅಭ್ಯರ್ಥಿ ಎಂ.ಸಿ.ಶಿವಾನಂದ ಸ್ವಾಮಿ ಲೇವಡಿ ಮಾಡಿದ್ದಾರೆ.

ಆರ್.ಎಸ್.ಎಸ್ ಬಹಿರಂಗವಾಗಿ ಡಾ. ಮಹೇಶ್ ಜೋಶಿ ಮತ್ತವರ ಪರವಾದ ಅಭ್ಯರ್ಥಿಗಳನ್ನು ಗೆಲ್ಲಿಸಲು ಫರ್ಮಾನು ಹೊರಡಿಸಿತ್ತು. ಅಭ್ಯರ್ಥಿಗಳಾದ ಡಾ.ಮಹೇಶ್ ಜೋಶಿ ಹಾಗೂ ಶ್ರೀನಿವಾಸ್ ಸಮ್ಮುಖದಲ್ಲಿ ಸಭೆ ನಡೆಸುವ ಮೂಲಕ ಗೆಲುವಿಗಾಗಿ ಪ್ರಯತ್ನ ನಡೆಸಿದ್ದಾರೆ ಎಂದು ದೂರಿದ್ದಾರೆ.  ಆರ್‌ಎಸ್‌ಎಸ್ ಹುಕ್ಕುಂ ನಡುವೆಯೂ ಬಿಜೆಪಿಯ ಅನೇಕ ಮುಖಂಡರು ಹಾಗೂ ಆ ಸಿದ್ದಾಂತವನ್ನು ಒಪ್ಪಿದ ಆಜೀವ ಸದಸ್ಯರು ತನ್ನನ್ನು ಬೆಂಬಲಿಸಿದ್ದು ವಿಶೇಷ ಇದರೊಂದಿಗೆ ವಿಭಿನ್ನ ಸಿದ್ದಾಂತಗಳನ್ನು ನಂಬುವ ಮತ್ತು ಪ್ರಗತಿಪರವಾಗಿ ಯೋಚಿಸುವ ಪ್ರಮುಖರು ೧೭೯೫ ಮತಗಳನ್ನು ನೀಡುವ ಮೂಲಕ ನನ್ನನ್ನು ಗೌರವಿಸಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಚುನಾವಣೆಯಲ್ಲಿ ಗೆಲ್ಲಬೇಕೆಂಬ ಕಾರಣಕ್ಕಾಗಿ ಹಲವು ವರ್ಷಗಳಿಂದ ಯಾವುದೇ ಪ್ರಯತ್ನ ನಡೆಸದೆ ಕನ್ನಡ ಸಾಹಿತ್ಯ ಪರಿಷತ್ತಿನ ಕೆಲವು ಹಿರಿಯರು ಮತ್ತು ಆಸಕ್ತರ  ಮನವಿ ಮೇರೆಗೆ ಸ್ಪರ್ಧೆ ಸಾರ್ವಜನಿಕ ಜೀವನದ ಚಟುವಟಿಕೆ ಗುರುತಿಸಿ ತನಗೆ ದೊಡ್ಡ ಮಟ್ಟದ ಮತವನ್ನು ನೀಡಿದ್ದಾರೆ ಅದಕ್ಕಾಗಿ ನನಗೆ ತೃಪ್ತಿ ಇದೆ ಎಂದಿದ್ದಾರೆ.