ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಯಗಳಿಸಿದ ಸೂರಿ ಶ್ರೀನಿವಾಸ್ ಅವರಿಗೆ ಚುನಾವಣಾಧಿಕಾರಿ. ತಹಸೀಲ್ದಾರ್ ಡಾ.ಕೆ.ಜೆ.ಕಾಂತರಾಜ್ ಬುಧವಾರ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು.

ನಗರದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೂರಿ ಶ್ರೀನಿವಾಸ್ ಅವರ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸಿದರು.  ಬಳಿಕ ತಹಸೀಲ್ದಾರ್ ಕಾಂತರಾಜ್ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಈ ಬಾರಿ ೪೪೪೫ ಮತಗಳು ಚಲಾವಣೆಯಾಗಿದ್ದು, ಸೂರಿ ಶ್ರೀನಿವಾಸ್ ಅವರು ೨೨೯೨ ಮತಗಳನ್ನು ಗಳಿಸಿ ೪೮೯ ಮತಗಳ ಅಂತರದಿಂದ ವಿಜೇತರಾಗಿದ್ದಾರೆ ಎಂದು ಘೋಷಿಸಿದರು

ಜಿಲ್ಲಾ ಕಸಾಪ ನೂತನ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ ಚುನಾವಣೆಯಲ್ಲಿ ತಮಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದವರಿಗೆ ಮತ್ತು ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.  ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯಲ್ಲಿ ಕನ್ನಡ ಕಟ್ಟುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಲು ಶ್ರಮಿಸುತ್ತೇನೆ, ಹಿಂದಿನ ಅಧ್ಯಕ್ಷರಾದ ಸಾಹಿತಿ ಅಜ್ಜಂಪುರ ಜಿ.ಸೂರಿ, ಸಾಹಿತಿ ಚಂದ್ರಯ್ಯನಾಯ್ಡು ಹುಲ್ಸೆ ಶ್ರೀವತ್ಸ, ಹೆಚ್. ಚಂದ್ರಪ್ಪ, ನಾ. ಸು. ಶಿವಸ್ವಾಮಿ ಅವರ ಹಾದಿಯಲ್ಲೇ ಸಾಗುತ್ತೇನೆ ಎಂದು ಹೇಳಿದರು. ಈ ವೇಳೆ ವಿವಿಧ ಸಂಘ ಸಂಸ್ಥೆಗಳು ಮತ್ತು ಸಂಘಟನೆಗಳ ಮುಖಂಡರು ಸೂರಿ ಶ್ರೀನಿವಾಸ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

ಸಾಹಿತಿ ಚಟ್ನಳ್ಳಿ ಮಹೇಶ್, ಲೇಖಕಿ ವಾಣಿ ಚಂದ್ರಯ್ಯನಾಯ್ಡು, ಸಾಂಸ್ಕೃತಿಕ ಸಂಘದ ಅಧ್ಯಕ್ಷ ಗಿರಿಧರ್ ಯತೀಶ್, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ್ ಜೋಷಿ, ಗುರುವೇಶ್, ಜಿ.ಬಿ.ಪವನ್, ಮಾವಿನಕೆರೆ ದಯಾನಂದ, ಭೈರೇಗೌಡ, ನ್ಯಾಯವಾದಿ ಬಿ.ಆರ್.ಜಗದೀಶ್, ಸೂರಿ ಶಶಿಧರ್, ನಾಗೇಶ್, ಹೆಚ್.ಸಿ.ನಟರಾಜ್, ಬಿ.ಪ್ರಕಾಶ್, ಪ್ರಭು ಸೂರಿ, ಪೃಥ್ವಿ ಸೂರಿ, ಜೇಮ್ಸ್ ವಾಸು ಪೂಜಾರಿ ಜಯರಾಂ, ಕಡೂರು ಬಿ. ಪ್ರಕಾಶ್, ಚುನಾವಣಾಧಿಕಾರಿ ವಿರೂಪಾಕ್ಷ ಉಪಸ್ಥಿತರಿದ್ದರು.

ಕಸಾಪ ಅಧ್ಯಕ್ಷರಾಗಿ ಅಜ್ಜಂಪುರ ಜಿ.ಸೂರಿ ಶ್ರೀನಿವಾಸ್ ಆಯ್ಕೆ