ಚಿಕ್ಕಮಗಳೂರು:  ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ಹಾಗೂ ಸ್ಕ್ಯಾನಿಂಗ್ ಸೆಂಟರ್ ಮೇಲೆ ದಾಳಿ ಮಾಡುತ್ತಿದ್ದು, ಇಂದು ಕಡೂರು ತಾಲೂಕಿನಲ್ಲಿ ಪರಿಶೀಲನೆ ನಡೆಸಿ ೪ ಖಾಸಗಿ ಕ್ಲಿನಿಕ್‌ಗಳ ಪೈಕಿ ಎರಡು ಲ್ಯಾಬ್, ೨ ಕ್ಲಿನಿಕ್ ಕೆಪಿಎಂಎ ನೊಂದಣಿ ಮಾಡಿರುವುದರಿಂದ ಅವುಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಅಶ್ವಥ್‌ಬಾಬು ತಿಳಿಸಿದರು.

ಅವರು ಇಂದು ಕಡೂರಿನಲ್ಲಿ ನಾಲ್ಕು ಖಾಸಗಿ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದಾಗ ಎರಡು ಕ್ಲಿನಿಕ್‌ಗಳು ಹಾಗೂ ಎರಡು ಲ್ಯಾಬ್‌ಗಳು ಕೆಪಿಎಂಎ ನೊಂದಣಿ ಮಾಡಿಕೊಳ್ಳದ ಕಾರಣ ಸೂಕ್ತ ಕ್ರಮ ಕೈಗೊಂಡು ಮುಚ್ಚಲು ಆದೇಶಿಸಲಾಗಿದೆ ಎಂದರು.

ಒಟ್ಟು ಕಡೂರಿನಲ್ಲಿ ೯ ಸ್ಕ್ಯಾನಿಂಗ್ ಸೆಂಟರ್‌ಗಳಿದ್ದು ತಪಾಸಣೆ ಮಾಡಿ ಪರಿಶೀಲಿಸುತ್ತಿದ್ದೇವೆ. ಇದುವರೆಗೆ ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ವರದಿಯಾಗಿಲ್ಲ ಆದರೂ ಪರಿಶೀಲಿಸುತ್ತಿದ್ದೇವೆ. ಜಿಲ್ಲೆಯಲ್ಲಿ ೫೯ ಸ್ಕ್ಯಾನಿಂಗ್ ಸೆಂಟರ್‌ಗಳಿದ್ದು ಅವುಗಳಿಗೆ ಭೇಟಿ ನೀಡಿ ಬ್ರೂಣ ಹತ್ಯೆ ಪ್ರಕರಣಗಳು ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದರು.

ಕೆಪಿಎಂಎ ನೊಂದಣಿ ಆಗದ ಕ್ಲಿನಿಕ್‌ಗಳು, ಪಾಲಿ ಕ್ಲಿನಿಕ್‌ಗಳು, ಲ್ಯಾಬ್, ಆಯುರ್ವೇದಿಕ್ ಆಸ್ಪತ್ರೆಗಳಿಗೆ ಭೇಟಿನೀಡಿ ಪರಿಶೀಲಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಒಟ್ಟು ೩೩ ನಸಿಂಗ್ ಹೋಮ್, ೨೮೬ ಚಿಕ್ಕ ಚಿಕ್ಕ ಕ್ಲಿನಿಕ್‌ಗಳಿವೆ, ೧೦ ಪಾಲಿ ಕ್ಲಿನಿಕ್‌ಗಳಿವೆ ಇವೆಲ್ಲವುಗಳಿಗೂ ನಮ್ಮ ಇಲಾಖೆ ತಂಡ ಭೇಟಿ ನೀಡಿ ತಪಾಸಣೆ ನಡೆಸಲಿದೆ. ಜೊತೆಗೆ ಗ್ರಾಮಾಂತರ ಪ್ರದೇಶದಲ್ಲಿ ಆರೋಗ್ಯ ಅಧಿಕಾರಿಗಳಿಗೆ ಅಧಿಕಾರ ನೀಡಿದ್ದು, ಈ ಭಾಗದಲ್ಲಿ ಕೆಪಿಎಂಎ ನೋಂದಣಿ ಆಗದ ಆಸ್ಪತ್ರೆಗಳನ್ನು ಪತ್ತೆಹಚ್ಚಲು ಸೂಚನೆ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಈ ವರೆಗೆ ಭ್ರೂಣಲಿಂಗ ಪತ್ತೆಗೆ ಸಂಬಂಧಿಸಿದ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ಸ್ಪ?ಪಡಿಸಿದ ಅಶ್ವಥ್‌ಬಾಬು ಮುಂದೆ ಇದು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಕೂಲಂಕುಶ ತನಿಖೆ ನಡೆಸುತ್ತಿದ್ದೇವೆ. ಸಾರ್ವಜನಿಕರು ದೂರು ಬರದಂತೆ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ದರಪಟ್ಟಿ ಹಾಕುವಂತೆ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರಿಗೆ ಕಾಣುವಂತೆ ಚಿಕಿತ್ಸೆ ದರ ಪಟ್ಟಿ ಹಾಕಬೇಕು ಇಲ್ಲವಾದರೆ ಅಂತಹ ಆಸ್ಪತ್ರೆಗಳ ಪರವಾನಗಿಯನ್ನು ರದ್ದುಪಡಿಸಲಾಗುವುದೆಂದು ಎಚ್ಚರಿಸಿದ ಅವರು ಜನಸ್ನೇಹಿ, ಆರೋಗ್ಯ ಸ್ನೇಹಿ ಸೇವೆ ಸಲ್ಲಿಸಬೇಕೆಂದು ಆದೇಶಿಸಲಾಗಿದೆ ಎಂದು ತಿಳಿಸಿದರು.

ಆಸ್ಪತ್ರೆಗಳಲ್ಲಿ ಉತ್ಪತಿಯಾಗುವ ಬಯೋಮೆಡಿಕಲ್ ವೇಸ್ಟ್‌ಅನ್ನು ಸರಿಯಾಗಿ ನಿರ್ವಹಣೆ ಮಾಡುವುದರ ಜೊತೆಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಲಾಗಿದ್ದು, ತಪ್ಪು ಕಂಡು ಬಂದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ|| ರವಿಕುಮಾರ್, ಡಾ|| ಶಶಿಕಲಾ ತಪಾಸಣಾ ತಂಡದಲ್ಲಿದ್ದರು.

KPMA non-registered clinic ordered to close in Kadur