ಚಿಕ್ಕಮಗಳೂರು:  ಜನರ ಪರವಾಗಿ ಕಾನೂನು ಪಾಲನೆ ಮಾಡುವ ಪೋಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬಕ್ಕೆ ರಕ್ಷಣೆ ನೀಡುವವರು ಯಾರು ಎಂದು ವಕೀಲರ ಮೇಲೆ ಹಲ್ಲೆ ನಡೆಸಿರುವ ಆರೋಪಕ್ಕೆ ಗುರಿಯಾಗಿರುವ ಪೋಲೀಸ್ ಸಿಬ್ಬಂದಿ ಕುಟುಂಬದವರು ಅಳಲು ತೋಡಿಕೊಂಡಿದ್ದಾರೆ.

ಮೊನ್ನೆ ವಕೀಲ ಪ್ರೀತಮ್ ಎಂಬುವವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಪ್ರತಿಭಟನೆ ನಡೆದು ನಗರ ಠಾಣೆಯ ಎಸ್‌ಐ ಸೇರಿ ಒಟ್ಟು ಆರು ಮಂದಿಯನ್ನು ಕರ್ತವ್ಯದಿಂದ ಅಮಾನತುಗೊಳಿಸಿದ್ದು, ಅಮಾನತುಗೊಳಗಾದ ಪೋಲೀಸ್ ಕುಟುಂಬದವರು ಪೊಲೀಸ್ ಮೇಲಾಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡಿದ್ದಾರೆ.

ತಮ್ಮ ಕುಟುಂಬದ ಪೋಲೀಸರು ಜನರಿಗಾಗಿ ಕಾನೂನು ಪಾಲನೆಯಲ್ಲಿ ತೊಡಗಿದ್ದು ತಮ್ಮ ಕರ್ತವ್ಯ ಮಾಡಿದ ಕಾರಣಕ್ಕಾಗಿ ವಕೀಲರು ದೂರು ನೀಡಿದ ಪರಿಣಾಮ ಅಮಾನತುಗೊಳಿಸಿ ಇದರಿಂದ ನೊಂದಿರುವ ಸಿಬ್ಬಂದಿಯವರು ಎರಡು ದಿನದಿಂದ ಮನೆಗೆ ಬರದೆ ಕಾಣೆಯಾಗಿದ್ದಾರೆ, ಕಾನೂನು ಪಾಲನೆಗಾಗಿ ಕರ್ತವ್ಯ ನಿರ್ವಹಿಸುವ ಪೊಲೀಸರು ಅವರ ಕುಟುಂಬಕ್ಕೆ ರಕ್ಷಣೆ ನೀಡುವವರು ಯಾರು ಎಂದು ಪ್ರಶ್ನಿಸಿದರು.

ನಗರ ಠಾಣೆಯ ಆವರಣದಲ್ಲಿ ಆರೋಪಿ ಪೋಲೀಸರ ಕುಟುಂಬದ ಸದಸ್ಯರು ಜಮಾವಣೆಗೊಂಡಿದ್ದು, ಈ ಸಂದರ್ಭದಲ್ಲಿ ಶಶಿ ಎಂಬ ಪೋಲೀಸ್ ಪೇದೆ ಪತ್ನಿ ಚೈತ್ರಶ್ರೀ ಎಂಬುವವರು ಮಾಧ್ಯಮದವರೊಂದಿಗೆ ಮಾತನಾಡಿ ತಮ್ಮ ಪತಿ ಕಾನೂನು ಉಲ್ಲಂಘನೆ ಮಾಡಿ ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡುತ್ತಿದ್ದನ್ನು ತಡೆದು ದಂಡ ಕಟ್ಟುವಂತೆ ಠಾಣೆಗೆ ಕರೆದೊಯ್ದಿದ್ದಾರೆ, ನಂತರ ಏನಾಗಿದೆಯೋ ಗೊತ್ತಿಲ್ಲ ಆದರೆ ಬಾರ್‌ಕೌನ್ಸಿಲ್‌ನವರು ದೂರು ನೀಡಿ ಪ್ರತಿಭಟನೆ ನಡೆಸಿ ತಮ್ಮ ಪತಿಯನ್ನು ಆರೋಪಿತರಾಗಿ ಮಾಡಿದ್ದಾರೆ ಅವರು ಕರ್ತವ್ಯ ಮಾಡಿದ್ದು ತಪ್ಪೇ ಎಂದು ಹೇಳಿದರು.

ಈ ಬಗ್ಗೆ ಎಸ್ಪಿ ಅವರಿಗೆ ದೂರು ನೀಡಿದರೂ ಏನು ಕ್ರಮ ಕೈಗೊಂಡಿಲ್ಲ ತಮ್ಮ ಪತಿ ಎರಡು ದಿನದಿಂದ ಮನೆಗೆ ಬಂದಿಲ್ಲ, ಮೊಬೈಲ್ ಸ್ವಿಚ್ ಆಫ್ ಆಗಿದೆ ಎಲ್ಲಾದರೂ ಆತ್ಮಹತ್ಯೆ ಮಾಡಿಕೊಂಡರೆ ನಮ್ಮ ಕುಟುಂಬದ ಗತಿ ಏನು ಎಂದು ಅಳಲು ತೋಡಿಕೊಂಡರು.

ಇನ್ನೋರ್ವ ಸಿಬ್ಬಂದಿ ಮಹೇಶ್ ಅವರ ಸಹೋದರಿ ಭಾರತಿ ಮಾತನಾಡಿ ಜನರ ಪರವಾಗಿ ಕೆಲಸ ಮಾಡುವ ಪೋಲೀಸರಿಗೆ ಈ ರೀತಿ ತೊಂದರೆ ಆದರೆ ಪೋಲೀಸ್ ಸಿಬಂದಿಯವರು ಏಕೆ ಕೆಲಸ ಮಾಡಬೇಕೆಂದು ಪ್ರಶ್ನಿಸಿದರಲ್ಲದೆ ಕಾನೂನು ಪಾಲನೆ ಮಾಡುವುದನ್ನು ಬಿಟ್ಟು ಪೋಲೀಸರು ಮನೆಯಲ್ಲಿ ಕುಳಿತರೆ ಜನರ ಪರಿಸ್ಥಿತಿ ಏನಾಗಬೇಕು ಪೊಲೀಸ್ ಸಿರಿಯ ಅಧಿಕಾರಿಗಳು ಈ ಬಗ್ಗೆ ಗಮನಿಸಬೇಕೆಂದು ಒತ್ತಾಯಿಸಿದರು.

ಹೆಚ್ಚುವರಿ ಪೋಲೀಸ್ ಅಧೀಕ್ಷಕ ಕೃ?ಮೂರ್ತಿ ಅವರ ಬಳಿ ಆರೋಪಿತ ಪೋಲೀಸ್ ಕುಟುಂಬದವರು ತಮ್ಮ ಅಳಲನ್ನು ಹೇಳಿಕೊಳ್ಳುತ್ತಿದ್ದರು.

No protection for law abiding police – cries of family members