ಚಿಕ್ಕಮಗಳೂರು:  ಬರ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಗೋಕಟ್ಟೆಗಳನ್ನು ಗುರುತಿಸಿ ನೀರು ತುಂಬಿಸುವ ಕಾರ್ಯ ಆರಂಭಿಸುವಂತೆ ಪಶುಸಂಗೋಪನಾ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಬಿ. ಗೋಪಾಲಕೃಷ್ಣ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು ಬರ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ನೀರು ಮೇವಿಗೆ ಅಭಾವ ಆಗದಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕುಡಿಯುವ ನೀರು ಮತ್ತು ಮೇವು ಸರಬರಾಜಿಗೆ ಯಾವುದೇ ರೀತಿಯ ಹಣದ ಕೊರತೆ ಇಲ್ಲ ಜಲಜೀವನ್ ಮಿಷನ್ ಯೋಜನೆ ವಿಕೋಪ ಪರಿಹಾರ ನಿಧಿ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಟಾಸ್ಕ್ ಪೋರ್ಸ್ ಸಮಿತಿಯ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಜಲಜೀವನ್ ಮಿ?ನ್ ಯೋಜನೆಯಡಿ ೩.೩೬ ಕೋಟಿ ರೂ ಬಿಡುಗಡೆಯಾಗಿದ್ದು ಮಳೆಗಾಲ ಆರಂಭವಾಗುವ ಮುನ್ನ ಏಕಾಏಕಿ ನೀರಿಗೆ ಸಮಸ್ಯೆ ಆದ ತಕ್ಷಣ ಕ್ರಮ ಕೈಗೊಳ್ಳುವ ವ್ಯವಸ್ಥೆ ಮಾಡಲಾಗಿದೆ. ನೈಸರ್ಗಿಕ ಜಲ ಮೂಲಗಳಾದ ಕೆರೆ, ಗೋಕಟ್ಟೆಗಳ ನಿರ್ವಹಣೆಗಾಗಿ ಪ್ರತಿ ಕಂದಾಯ ಉಪವಿಭಾಗದಲ್ಲಿ ಆಯಾ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು ಕೆರೆ ಅಥವಾ ಗೋಕಟ್ಟೆಗಳನ್ನು ಒತ್ತುವರಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಜಾನುವಾರುಗಳಿಗೆ ಮೇವು ಒದಗಿಸಲು ಮುಂದಿನ ೨೩ ವಾರಗಳಿಗೆ ಆಗುವ? ಮೇವು ದಾಸ್ತಾನಿದ್ದು ಹಸಿರುಮೇವು ಬೆಳೆಯುವ ಸಲುವಾಗಿ ಬಾಸೂರು ಮತ್ತು ಬೀರೂರು ಅಮೃತ್ ಮಹಲ್ ಕಾವಲುಗಳಿಗೆ ಜವಾಬ್ದಾರಿ ವಹಿಸಲಾಗಿದೆ ಎಂದರು.

ಮೇವು ಬೆಳೆಯುವ ಸಲುವಾಗಿ ರೈತರಿಗೆ ೫ ತಾಲೂಕುಗಳಲ್ಲಿ ೨೫ ಸಾವಿರ ಬಿತ್ತನೆ ಬೀಜದ ಕಿಟ್‌ಗಳನ್ನು ವಿತರಿಸಲಾಗಿದೆ. ಭೂಮಿ ಇಲ್ಲದ ಜಾನುವಾರುಗಳನ್ನು ಹೊಂದಿರುವವರಿಗೆ ನೇರವಾಗಿ ಮೇವು ಸರಬರಾಜು ಮಾಡುವುದಾಗಿ ತಿಳಿಸಿದರು.

ಕುಡಿಯುವ ನೀರು ಅಥವಾ ಜಮೀನಿನ ಉದ್ದೇಶಕ್ಕೆ ಕೊಳವೆ ಬಾವಿ ಕೊರೆಸುವವರು ಕಡ್ಡಾಯವಾಗಿ ಅನುಮತಿ ಹಾಗೂ ಪ್ರತಿ ಗ್ರಾಮ ಪಂಚಾಯಿತಿ ಪಿಡಿಓಗಳಿಂದ ಎನ್‌ಓಸಿ ಪಡೆಯಬೇಕು ನಿಯಮಗಳನ್ನು ಉಲ್ಲಂಘಿಸಿ ಕೊಳವೆಬಾವಿ ಕೊರೆದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹಕ್ಕಿ ಪಕ್ಷಿಗಳು ನೀರು ಕುಡಿಯುವ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.

Notice to identify Go Katte and fill it with water in drought conditions