ಗುವಾಹಟಿ: ಅರಣ್ಯದಲ್ಲಿ ಹಾದು ಹೋಗುವ ರೈಲು ಮಾರ್ಗದಲ್ಲಿ ವನ್ಯಜೀವಿಗಳು ರೈಲಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ಅಸ್ಸಾಂನಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಗುವಾಹಟಿಯಿಂದ ದೆಹಲಿಗೆ ಹೋಗುತ್ತಿದ್ದ ಕಾಮಾಕ್ಯಾ-ಜೋಗಿಘೋಪಾ ಮಾರ್ಗದಲ್ಲಿ ಕಾಮರೂಪ ಜಿಲ್ಲೆಯ ಪಾಲಸ್ಬರಿ ಮತ್ತು ಗೋಸೈಹತ್ ಮಧ್ಯೆ ಸರಕು ಸಾಗಣೆ ರೈಲು ಆನೆಗಳಿಗೆ ಡಿಕ್ಕಿ ಹೊಡೆದಿದ್ದು, ಇದರಿಂದ ಒಂದು ಆನೆ ಸಾವನ್ನಪ್ಪಿದೆ. ಮತ್ತೊಂದಕ್ಕೆ ಗಾಯವಾಗಿದೆ. ಆದರೆ, ಈ ಆನೆ ಮತ್ತೆ ಕಾಡಿನೊಳಗೆ ಕಣ್ಮರೆ ಆಗಿದೆ. ಈ ಆನೆಗಳು ಮಲಿಯಾಟ ಬೆಟ್ಟದಿಂದ ಆಹಾರ ಅರಸಿಕೊಂಡು ಕೆಳಗೆ ಬಂದಿದ್ದಾಗ ರೈಲು ಹಳಿ ದಾಟುತ್ತಿದ್ದವು ಎನ್ನಲಾಗಿದೆ.

ವೇಗವಾಗಿ ಬರುತ್ತಿದ್ದ ರೈಲು ಡಿಕ್ಕಿ ಹೊಡೆದ ರಭಸಕ್ಕೆ ಆನೆಯ ರೈಲಿನೊಟ್ಟಿಗೆ ಬಹುದೂರದವರೆಗೆ ಸಾಗಿದೆ. ಅರಣ್ಯ ಮತ್ತು ರೈಲ್ವೆ ಇಲಾಖೆಯ ಅಧಿಕಾರಿಗಳು ರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯವನ್ನು ಚುರುಕಿನಿಂದ ನಡೆಸಿದರು. ಬೆಳಗ್ಗೆಯ ಹೊತ್ತಿಗೆ ರೈಲು ಮಾರ್ಗದಲ್ಲಿ ಪುನರ್‌ಸಂಚಾರ ಆರಂಭವಾಯಿತು.

ಈ ಪ್ರದೇಶದಲ್ಲಿ ರೈಲು ಮಾರ್ಗದಲ್ಲಿ ವನ್ಯಜೀವಿಗಳು ಅಪಘಾತಕ್ಕೆ ಸಿಲುಕಿ ಸಾವನ್ನಪ್ಪುವ ಪ್ರಕರಣ ಹೆಚ್ಚಿದೆ. ಆದರೂ ಕಾಡು ಪ್ರಾಣಿಗಳ ರಕ್ಷಣೆಗೆ ರೈಲ್ವೆ ಇಲಾಖೆ, ರಾಜ್ಯ ಮತ್ತು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ರೈಲುಗಳು ನಿಧನವಾಗಿಯೂ ಸಂಚರಿಸುವುದಿಲ್ಲ ಎಂದು ಪರಿಸರ ಹೋರಾಟಗಾರರು ದೂರಿದ್ದಾರೆ.

ಅರಣ್ಯ ವಾಪ್ತಿಯಲ್ಲಿ ರೈಲು ಮಾರ್ಗ ನಿರ್ಮಿಸಿದ್ದೇ ಮೊದಲ ತಪ್ಪು. ನಾಗರಿಕ ಸೇವೆಯ ನೆಪ ಮಾಡಿಕೊಂಡು ಕಾಡು ಪ್ರಾಣಿಗಳ ಸಹಜ ಆವಾಸ ಸ್ಥಾನಗಳನ್ನುನಾಶ ಮಾಡಲಾಗುತ್ತಿದೆ. ಅದರಲ್ಲೂ ಚಲನಶೀಲ ಪ್ರಾಣಿಗಳಾದ ಆನೆಗಳು ಆಹಾರಕ್ಕಾಗಿ ಅಡ್ಡಾಡುತ್ತಿರುತ್ತವೆ. ಅವುಗಳ ಚಲನವಲನಕ್ಕೆ ರೈಲು ಮಾರ್ಗ ಮೃತ್ಯು ಪಾಶವಾಗಿದೆ ಎಂದಿದ್ದಾರೆ.

ಮಾನವ ಮತ್ತು ವನ್ಯ ಜೀವಿ ಸಂಘರ್ಷವನ್ನು ಕಡಿಮೆ ಮಾಡಲು ಅರಣ್ಯ ಇಲಾಖೆ ಕೂಡ ಗಮನಕೊಡುತ್ತಿಲ್ಲ. ವನ್ಯ ಜೀವಿ ಆವಾಸ ಸ್ಥಾನಗಳಲ್ಲಿ ಅವಕ್ಕೆ ಮೊದಲ ಪ್ರಾಶಸ್ತ್ಯ ಸಿಗಬೇಕೆ ಹೊರತು, ಅಭಿವೃದ್ಧಿ ಕಾರ್ಯಗಳಿಗೆ ಅಲ್ಲ. ಕಾಡಿನಲ್ಲಿ ಮಾನವನ ಹಸ್ತಕ್ಷೇಪ ಹೆಚ್ಚಿದಷ್ಟು ವನ್ಯಮೃಗಗಳು ಅರಣ್ಯದಂಚಿನ ಹೊಲ, ಗ್ರಾಮಗಳಿಗೆ ಲಗ್ಗೆ ಇಡುತ್ತವೆ. ಕಷ್ಟಪಟ್ಟು ಬೆಳೆ ಬೆಳೆದ ರೈತ ಅವುಗಳನ್ನು ನಿಗ್ರಹಿಸಲು ಕುಟಿಲೋಪಾಯ ಮಾಡುತ್ತಾನೆ. ನಂತರ ಅರಣ್ಯ ಇಲಾಖೆಯವರು ರೈತನನ್ನು ಬಲಿಪಶು ಮಾಡುತ್ತಾರೆ. ಈ ವಿಷ ವರ್ತುಲದಿಂದ ಹೊರಬರುವಂತಹ ಪರಿಣಾಮಕಾರಿ ಯೋಜನೆಯನ್ನು ಅರಣ್ಯ ಇಲಾಖೆ ಮಾಡುತ್ತಿಲ್ಲ ಎಂದೂ ದೂರಿದ್ದಾರೆ.

ಇದನ್ನೂ ಓದಿ: ಏರ್‌ಟೆಲ್‌ನಲ್ಲಿ 7500 ಕೋಟಿ ಹೂಡಿಕೆ ಮಾಡಲಿದೆ ಗೂಗಲ್

(One Elephant Killed, Another Injured After Being Hit By Speeding Train In Assam)