ಚಿಕ್ಕಮಗಳೂರು: ಬೆಳೆಗಳನ್ನು ಬೆಳೆಯಲು ಹೊಸ ಹೊಸ ತಾಂತ್ರಿಕತೆ ಮತ್ತು ಕೀಟ ಬಾದೆ ನಿಯಂತ್ರಣದ ಕುರಿತು ಆಸಕ್ತಿ ವಹಿಸುತ್ತಿರುವಂತೆ ನೀರಿನ ಸಂರಕ್ಷಣೆ ಹಾಗೂ ಅದರ ನಿರ್ವಹಣೆ ಮಾಡುವ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸುಜಾತ ತಿಳಿಸಿದರು.

ಅವರು ಇಂದು ಹಾದಿಹಳ್ಳಿಯ ರೈನಿ ರಿಸರ್ಚ್ ಅಂಡ್ ಇನೋವೇಷನ್ ಫ್ಯಾಕ್ಟರಿಯಲ್ಲಿ ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ಬ್ಯೂರೋ ಆಫ್ ಎನರ್ಜಿ ಎಫಿಸಿಯನ್ಸಿ ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಇವರು ಸಹಯೋಗದಲ್ಲಿ ಬಿಇಇ ಸ್ಟಾರ್ ಲೇಬಲ್ ಹೊಂದಿರುವ ಹೆಚ್ಚು ವಿದ್ಯುತ್ ದಕ್ಷತೆಯುಳ್ಳ ಕೃಷಿ ಪಂಪ್‌ಸೆಟ್‌ಗಳು ಹಾಗೂ ಜಲಸಂರಕ್ಷಣೆ ಕುರಿತು ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇವರ ಪೂಜೆ ಎಲ್ಲಾ ಕಡೆ ಮಾಡುತ್ತೇವೆ ಆದರೆ ತಿರುಪತಿ, ಧರ್ಮಸ್ಥಳ ಮುಂತಾದ ಕಡೆ ಹೋಗಿ ದೇವರ ದರ್ಶನ ಪಡೆದು ಪೂಜೆ ಮಾಡುವುದು ಆ ಸ್ಥಳದ ಮಹಿಮೆ ಎಂದು ಭಾವಿಸಿ ಪುಣ್ಯ ಲಭಿಸುತ್ತದೆ ಆ ಕಾರಣಕ್ಕೆ ಇಂದು ಈ ಸ್ಥಳವನ್ನು ರೈತರ ಪಾಲಿನ ಪುಣ್ಯ ಸ್ಥಳವೆಂದು ಭಾವಿಸಿದ್ದೇನೆ ಎಂದರು.

ರೈತರು ಇಲ್ಲಿ ಭಾಗವಹಿಸಿದ ಬಳಿಕ ಈ ತರಬೇತಿ ಕಾರ್ಯಕ್ರಮದ ಉದ್ದೇಶ ಉಪಯೋಗವಾಗಿದೆಯೇ ಎಂಬ ಬಗ್ಗೆ ಮಾಹಿತಿ ಬೇಕು. ತರಬೇತಿ ಚೆನ್ನಾಗಿತ್ತು ಎಂಬ ಅಭಿಪ್ರಾಯಗಳು ಬಂದರೆ ಮುಂದೆ ಬೇರೆ ಬೇರೆ ಭಾಗಗಳಲ್ಲಿ ಇತರ ರೈತರೊಂದಿಗೆ ಇಂತಹ ಕಾರ್ಯಾಗಾರಗಳನ್ನು ಆಯೋಜಿಸಲಾಗುವುದೆಂದು ಹೇಳಿದರು.

ಒಬ್ಬ ರೈತರು ಮೊದಲು ನೀವು ನಿಮ್ಮ ಕಡೆಯ ೧೦ ಜನರನ್ನು ಇಂತಹ ತರಬೇತಿ ಕಾರ್ಯಕ್ರಮಕ್ಕೆ ಕಳಿಸುವಂತಾಗಬೇಕು. ತರಬೇತಿ ಮತ್ತು ಭೇಟಿ ಹಿಂದೆ ಗ್ರಾಮ ಸಹಾಯಕರು ಪ್ರತಿ ದಿನ ಒಂದೊಂದು ಗ್ರಾಮವನ್ನು ಭೇಟಿ ಮಾಡಿ ರೈತರಿಗೆ ಉಪಯುಕ್ತ ಮಾಹಿತಿ ನೀಡುತ್ತಿದ್ದರು. ಅದು ರೈತರಿಗೆ ಸಮರ್ಪಕವಾಗಿ ತಲುಪದಿದ್ದರಿಂದ ಈಗ ಅದೇ ಮಾದರಿಯಲ್ಲಿ ರೈತ ಸಂಪರ್ಕ ಕೇಂದ್ರಗಳನ್ನು ಸರ್ಕಾರ ಸ್ಥಾಪಿಸಿ ಉಪಯುಕ್ತ ಮಾಹಿತಿ ನೀಡುತ್ತಿದೆ ಎಂದರು.

ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ರೈತರು ಸದುಪಯೋಗಪಡೆದುಕೊಳ್ಳಬೇಕು, ಚೆಕ್ ಡ್ಯಾಂ, ಕೆರೆ ಅಭಿವೃದ್ಧಿ ಮತ್ತಿತರ ಸೌಲಭ್ಯವನ್ನು ಕೇಳುವುದನ್ನು ಬಿಟ್ಟರೆ ಕೃಷಿ ಬಗ್ಗೆ ವಿಷಯ ಮತ್ತು ಜ್ಞಾನ ತಿಳಿದುಕೊಳ್ಳಲು ಕೇಳುವುದಿಲ್ಲ ಸರ್ಕಾರ ಪ್ರತಿ ಯೋಜನೆ ಜಾರಿ ಮಾಡಿದಾಗಲೂ ತರಬೇತಿಗೆ ಇಂತಿಷ್ಟು ಸಮಯ ಹಾಗೂ ಅನುದಾನ ಮೀಸಲಿಟ್ಟಿರುತ್ತದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ರೈತರಿಗೆ ಉಪಯುಕ್ತ ಮಾಹಿತಿಯನ್ನು ತರಬೇತಿಯ ಅವಧಿಯಲ್ಲಿ ನೀಡಬೇಕು ಈ ತರಬೇತಿ ಕಾರ್ಯಾಗಾರಕ್ಕೆ ಅಜ್ಜಂಪುರ ಮತ್ತು ತರೀಕೆರೆ ತಾಲೂಕುಗಳಿಂದ ಹೆಚ್ಚು ರೈತರನ್ನು ಕರೆತರುವಂತೆ ಸಹಾಯಕ ಕೃಷಿ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

ಬಯಲು ಭಾಗದ ಈ ೨ ತಾಲೂಕುಗಳಲ್ಲಿ ಹೆಚ್ಚು ಪಂಪ್‌ಸೆಟ್‌ಗಳನ್ನು ಬಳಸುತ್ತಿರುವುದರಿಂದ ಅಲ್ಲಿನ ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕು. ಬೆಳೆಗಳಿಗೆ ರೋಗ ತಗುಲಿದಾಗ ಕೀಟನಾಶಕ ಮಾರಾಟಗಾರರಿಂದ ಮಾಹಿತಿ ಪಡೆದು ಅದೇ ಸರಿ ಎಂದು ಭಾವಿಸಿ, ಮಾರಾಟಗಾರರು ಹೇಳಿದಂತೆ ರೈತರು ನಡೆದುಕೊಳ್ಳುತ್ತಾರೆ. ಅದೇ ರೀತಿ ಇಂದಿನ ಈ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದು ಭಾವಿಸಿದ್ದೇನೆ ಈ ನಿಟ್ಟಿನಲ್ಲಿ ರೈತರ ಸಹಕಾರ ಅಗತ್ಯವಾಗಿದ್ದು, ವಿಜ್ಞಾನಿ ಉಲ್ಲಾಸ್ ರವರು ನಿಮ್ಮ ಪ್ರಶ್ನೆಗಳಿಗೆ ಅಗತ್ಯ ಮಾಹಿತಿ ನೀಡುತ್ತಾರೆ ಎಂದರು.

ಈ ತರಬೇತಿ ಕಾರ್ಯಾಗಾರದಲ್ಲಿ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಉಲ್ಲಾಸ್ ಎಂ.ವೈ, ಹಾದಿಹಳ್ಳಿಯ ರೈನಿ ರಿಸರ್ಚ್ ಅಂಡ್ ಇನೋವೇಟಿವ್ ಫ್ಯಾಕ್ಟರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೈಕಲ್ ಸದಾನಂದ್ ಬ್ಯಾಕ್ಟಿಸ್ಟ್, ತರೀಕೆರೆ ತಾಲೂಕು, ಲಿಂಗದಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಪ್ರಭಾರ ಸಹಾಯಕ ಕೃಷಿ ನಿರ್ದೇಶಕರಾದ ವಿನುತಾ ಟಿ.ಎಸ್ ಹಾಗೂ ವಿವಿಧ ತಾಲೂಕುಗಳಿಂದ ರೈತರು ಭಾಗವಹಿಸಿದ್ದರು.

Organized training workshop on water conservation