ಚಿಕ್ಕೋಡಿ: ನನ್ನನ್ನು ವೈಯಕ್ತಿಕವಾಗಿ ಟೀಕೆ ಮಾಡಿದ್ರೆ ಸುಮ್ಮನಿರುತ್ತೇನೆ. ಜಾತಿ ಹಿಡಿದು ಟೀಕೆ ಮಾಡಿದ್ರೂ ಸುಮ್ಮನಿರುತ್ತೇನೆ. ಆದರೆ ಹಿಂದೂ ಧರ್ಮದ ಕುರಿತು ಮಾತನಾಡಿದ್ರೆ ಸುಮ್ಮನಿರಲ್ಲ. ಸತೀಶ್ ಜಾರಕಿಹೊಳಿಯವರೇ (Satish Jarkiholi) ನಿಮಗೆ ತಾಕತ್ತಿದ್ದರೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಯುವ ಬ್ರಿಗೆಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಸವಾಲು ಹಾಕಿದರು.

ಹಿಂದೂ (Hindu Word) ಪದವನ್ನು ಅಶ್ಲೀಲ ಎಂದು ಜರಿದಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಗೆ ಅವರದ್ದೇ ಕ್ಷೇತ್ರ ಯಮಕನಮರಡಿಯಲ್ಲಿ ಹಿಂದೂ ಪರ ಸಂಘಟನೆಗಳು ಸೆಡ್ಡು ಹೊಡೆದು ʼನಾನು ಹಿಂದೂʼ ಸಮಾವೇಶ ಆಯೋಜಿಸಿವೆ. ಸಮಾವೇಶದಲ್ಲಿ ಸತೀಶ್ ಜಾರಕಿಹೊಳಿ ವಿರುದ್ಧ ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ ನಡೆಸಿದರು.

ಹಿಂದೂ ಪದದ ಬಗ್ಗೆ ಕೆಟ್ಟದಾಗಿ ಮಾತನಾಡಿರುವವರಿಗೆ ತಕ್ಕ ಉತ್ತರ ಕೊಡ್ಬೇಕಾಗಿತ್ತು. ಅದಕ್ಕೆ ಇಲ್ಲಿ ಬಂದು ಮಾತಡ್ತಿದ್ದೀನಿ. ಹಿಂದೂ ಎನ್ನುವುದನ್ನು ಅಶ್ಲೀಲ ಎಂದು ಕರೆದಾಗ ಅದಕ್ಕೆ ತಕ್ಕ ಉತ್ತರ ಕೊಡಲೇಬೇಕಾಗಿತ್ತು. ನನ್ನ ಧರ್ಮ ಮತ್ತು ತಾಯಿಯ ಬಗ್ಗೆ ಮಾತನಾಡಿದವರ ಕ್ಷೇತ್ರಕ್ಕೆ ಹೋಗಬೇಕು ಅಂತ ಯಮಕನಮರಡಿಗೆ ಬಂದಿದ್ದೇನೆ. ಡಿಕ್ಷನರಿ ನೋಡಿಕೊಂಡು ಮಾತನಾಡುವ ಪುಣ್ಯಾತ್ಮರಿಗೆ ಯಾವ ಡಿಕ್ಷನರಿ ಅಂತ ಮರೆತು ಹೋಗಿದೆ. ಹಿಂದೂ ಸಮಾಜ ತಿರುಗಿಬಿದ್ರೆ ಏನಾಗುತ್ತೆ ಅನ್ನೋದು ಇಂದು ಯಮಕನಮರಡಿಯಲ್ಲಿ ಪ್ರೂವ್ ಆಗಿದೆ ಎಂದು ಕೆಂಡ ಕಾರಿದರು.

ಹಿಂದೂ ಎಂದರೆ ಅಶ್ಲೀಲವಾ ಹಿಂದೂ ಎಂದರೆ ಬದುಕಿನ ಶೈಲಿ ಎಂದು ಸುಪ್ರಿಂಕೋರ್ಟ್ ಹೇಳುತ್ತೆ. ನಮ್ಮ ಜನರನ್ನು ಮತಾಂತರ ಮಾಡಲು ಬಂದ ಕ್ರಿಶ್ಚಿಯನ್ನರೇ ಮತಾಂತರವಾದರು. ದೇವರಿದ್ದಾನೆ ಎನ್ನುವವ ದೇವರಿಲ್ಲ ಎನ್ನುವ ಇಬ್ಬರೂ ಸಹ ಹಿಂದೂಗಳೇ. ಹಿಂದೂ ಧರ್ಮಕ್ಕೆ ಒಂದು ಗ್ರಂಥ ಅಂತ ಇಲ್ಲ. ಹಿಂದೂ ಧರ್ಮಕ್ಕೆ ಸಂಸ್ಥಾಪಕರಿಲ್ಲ ಇದೊಂದು ವಿಜ್ಞಾನ ವಿಜ್ಞಾನಕ್ಕೆ ಯಾರೂ ಸಹ ಸಂಸ್ಥಾಪಕರಿಲ್ಲ. ಅಂಬೇಡ್ಕರ್ ಸೇರಿದಂತೆ ಮಹಾನ್ ಪುರುಷರು ಯಾರೂ ಸಹ ಹಿಂದೂ ಧರ್ಮದ ಬಗ್ಗೆ ಮಾತನಾಡಲಿಲ್ಲ. ಅವರ ಫೋಟೋಗಳನ್ನು ಹಾಕಿ ನೀವು ಹಿಂದೂ ಬಗ್ಗೆ ಮಾತನಾಡ್ತಿರಲ್ಲ ಎಂದು ಕಿಡಿಕಾರಿದರು.

ಹಿಂದೂ ಧರ್ಮ ಯಾವುತ್ತೂ ಹೇಡಿಗಳನ್ನು ಹುಟ್ಟಿಸಲಿಲ್ಲ. ಹಿಂದೂ ಧರ್ಮ ತನ್ನ ಧರ್ಮವನ್ನು ರಕ್ಷಣೆ ಮಾಡುವ ಹಾಗೂ ಅಗತ್ಯ ಬಿದ್ದರೆ ಪ್ರಾಣ ತೆಗೆಯುವ ವೀರರನ್ನು ಹುಟ್ಟಿಸಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಸಾಹೇಬ್ ಜೊಲ್ಲೆ ಸೇರಿ ಹಲವರು ಪಾಲ್ಗೊಂಡಿದ್ದಾರೆ

Sulibele challenges Satish Jarkiholi