ನಿಯಮ ಪ್ರಕಾರವೇ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ತಾವುಗಳು ಬಸ್ ನಿಲ್ದಾಣದ ಪರಿಶೀಲನೆಗೆ ಸಮಿತಿ ಕಳಿಸಿಕೊಡಬೇಕು ಎಂದು ರಾಮದಾಸ್ (SA Ramadas) ಮನವಿ ಮಾಡಿದ್ದಾರೆ. ಆದರೆ ವಿವಾದಿತ ಬಸ್ ನಿಲ್ದಾಣ ನಮ್ಮ ಜಾಗದಲ್ಲಿದೆ. ಇದಕ್ಕೆ ನಮ್ಮ ಅನುಮತಿಯನ್ನೇ ಪಡೆದಿಲ್ಲ. ಹೀಗಾಗಿ ಇದು ಅನಧಿಕೃತ. ಹೀಗಾಗಿ ಏಳು ದಿನದಲ್ಲಿ ತೆರವು ಮಾಡಿ ಎಂದು ಕೆಆರ್‌ಐಡಿಎಲ್‌ (KRIDL) ಗೆ ನೋಟಿಸ್ ನೀಡಿದೆ.

ಗುಂಬಜ್ ತೆರವು ಮಾಡುವಂತೆ ಸಂಸದ ಪ್ರತಾಪ್ ಸಿಂಹ (Pratap Simha) ನೀಡಿದ್ದ ಡೆಡ್‌ಲೈನ್ ನಾಳೆಗೆ ಮುಗಿಯಲಿದೆ. ಈ ಹೊತ್ತಲ್ಲೇ ಕಳೆದ ರಾತ್ರಿ, ಗುಂಬಜ್ ಶೈಲಿಯ ಬಸ್ ನಿಲ್ದಾಣದಲ್ಲಿ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ (Basavaraj Bommai), ಸುತ್ತೂರು ಶ್ರೀಗಳ (Shivaratri Deshikendra Swamiji) ಫೋಟೋ ಅಳವಡಿಸಲಾಗಿದೆ. ಇದಕ್ಕೆ ಜೆಎಸ್‌ಎಸ್ (JSS) ಬಸ್ ನಿಲ್ದಾಣ ಅಂತಲೂ ಹೆಸರಿಡಲಾಗಿದೆ.

ಈ ಮೂಲಕ ಪಕ್ಷ, ಧರ್ಮ ಮುಂದೆ ಬಿಟ್ಟು ಬಸ್ ನಿಲ್ದಾಣದ ಗುಂಬಜ್ ರಕ್ಷಿಸುವುದರ ಜೊತೆಗೆ ಸವಾಲು ಹಾಕಿದ್ದ ಸಂಸದರನ್ನು ಪೇಚಿಗೆ ಸಿಲುಕಿಸುವ ಪ್ರಯತ್ನಗಳು ನಡೆದಿವೆ. ಈ ಚರ್ಚೆಗಳ ಮಧ್ಯೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ ರಾಮದಾಸ್ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ವಿವಾದದ ಕುರಿತಾಗಿ ವಿವರಣೆ ನೀಡಿದ್ದಾರೆ. ಅಂದ ಹಾಗೇ, ಈ ಗುಂಬಜ್ ಗುದ್ದಾಟಕ್ಕೆ ಎಸ್.ಎ ರಾಮದಾಸ್ ಮತ್ತು ಸಂಸದ ಪ್ರತಾಪ್ ಸಿಂಹ ನಡುವಿನ ತಿಕ್ಕಾಟವೇ ಕಾರಣ ಎನ್ನಲಾಗುತ್ತಿದೆ. ಧರ್ಮದ ನೆಪದಲ್ಲಿ ಇಬ್ಬರ ನಡುವೆ ಪ್ರತಿಷ್ಠೆಯ ಕಾಳಗ ಏರ್ಪಟ್ಟಿದೆ.

ಅರಮನೆ ವಿನ್ಯಾಸದಲ್ಲಿ ಈ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಇದರ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ, ಶೇ.60 ಕಾಮಗಾರಿ ಮಾತ್ರ ಮುಗಿದಿದೆ. ಶೇ.40ರಷ್ಟು ಕಾಮಗಾರಿ ಬಾಕಿ ಇದೆ. ಆದರೆ, ಇದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಮಸೀದಿ ಶೈಲಿ, ಮುಸ್ಲಿಂ ಗುತ್ತಿಗೆದಾರ ಎಂದು ಸುಳ್ಳು ಹಬ್ಬಿಸಲಾಗುತ್ತಿದೆ. ಪೊಲೀಸ್ ಆಯುಕ್ತರಿಗೆ ಪತ್ರ ಮುಖೇನ ದೂರು ನೀಡಿದ್ದೇನೆ. ಮೈಸೂರಿನಲ್ಲಿ ಇದೇ ಶೈಲಿಯಲ್ಲಿ ಹಲವು ನಿಲ್ದಾಣಗಳಿವೆ. ಇದರ ಗುತ್ತಿಗೆದಾರ ಮಹದೇವ್, ದಂತಿ ಕನ್ಸ್ಟ್ರಕ್ಷನ್ಸ್ ಹೆಸರಿನಲ್ಲಿ ನಿರ್ಮಾಣ ಮಾಡಲಾಗಿದೆ.

ಸಂಸದರ ಹೇಳಿಕೆ ನಂತರ ಕಳಶ ಅಳವಡಿಕೆ ಎನ್ನುವುದು ಸುಳ್ಳು. ಒಂದು ವಾರದ ಹಿಂದೆಯೇ ಇದನ್ನು ಅಳವಡಿಸಲಾಗಿದೆ. ಈ ನಿಲ್ದಾಣವನ್ನು ಪಾರಂಪರಿಕ ದೃಷ್ಟಿಯಿಂದ ನಿರ್ಮಿಸಲಾಗುತ್ತಿದೆ. ಇದನ್ನು ಯಾವುದೇ ಧರ್ಮದ ಆಧಾರದ ಮೇಲೆ ನಿರ್ಮಿಸುತ್ತಿಲ್ಲ. ಈ ವಿನ್ಯಾಸವನ್ನು ವಿವಾದ ಎಂದು ಪರಿಗಣಿಸಿದಲ್ಲಿ ತಜ್ಞರ ಸಮಿತಿ ರಚನೆ ಆಗಲಿ, ತಜ್ಞರ ವರದಿಯಲ್ಲಿ ತಪ್ಪಿದೆ ಎಂದು ತಿಳಿದಲ್ಲಿ ಬದಲಾಯಿಸಿ.. ನಮ್ಮ ಅಭ್ಯಂತರವೇನಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ

Bus stand land belongs to us vacate says NHAI