ಗಂಗಾವತಿ:  ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯಅವರು ಮುಖ್ಯಮಂತ್ರಿಯಾಗುವ ಸಾಧ್ಯತೆ ಇದ್ದರೆ, ಅವರಿಗೆ ನಮ್ಮ ಪಕ್ಷ ಬೆಂಬಲ ನೀಡುತ್ತದೆ ಎಂದು ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ದ ಅಭ್ಯರ್ಥಿ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ನಗರದ ಕನಕಗಿರಿ ರಸ್ತೆಯ ರಾಜ್ಯ ಉಗ್ರಾಣ ಕೇಂದ್ರದ ಮತಗಟ್ಟೆಯಲ್ಲಿ ಮತ ಚಲಾಯಿಸಿ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುವ ಸಂದರ್ಭ ಬಂದರೆ ಬೆಂಬಲಿಸುತ್ತೇನೆ ಎಂದು ಹೇಳಿದ್ದೆ. ಈಗಲೂ ಅದೇ ನಿಲುವಿಗೆ ಬದ್ಧನಾಗಿರುವುದಾಗಿ ಹೇಳಿದರು.

ಸಿದ್ದರಾಮಯ್ಯ(Siddaramaiah) ಅವರು ಅಭಿವೃದ್ಧಿ ಚಿಂತನೆ ಮಾಡುವ ವ್ಯಕ್ತಿ. ರಾಜ್ಯದಲ್ಲಿ ಯಾವ ಪಕ್ಷಕ್ಕೂ ಬಹುಮತ ಬರದೇ ಇದ್ದರೆ ನಮ್ಮ ಪಕ್ಷ ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡಲಿದೆ ಎಂದರು.

ಗಂಗಾವತಿ ಕ್ಷೇತ್ರ(Gangavati assembly constituency)ದ ಜನರು ನನ್ನ ಮೇಲೆ ವಿಶ್ವಾಸ ಇಟ್ಟು ಬೆಂಬಲ ವ್ಯಕ್ತಪಡಿಸಿದ್ದಾರೆ. ಬಳ್ಳಾರಿಯಲ್ಲಿ ನನ್ನ ಪತ್ನಿ ಲಕ್ಷ್ಮೇಅರುಣಾ ಗೆಲ್ಲುತ್ತಾರೆ. ಇದರಿಂದ ನಮ್ಮ ಪಕ್ಷ 13 ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಜನಾರ್ದನ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾಧ್ಯಕ್ಷ ಮನೋಹಗೌಡ ಹೇರೂರು, ಮುಖಂಡ ರಾಜೇಶ ರೆಡ್ಡಿ ಇದ್ದರು.

ನೀತಿ ಸಂಹಿತೆ ಉಲ್ಲಂಘಿಸಿದ ಕೆಆರ್‌ಪಿಪಿ ಅಭ್ಯರ್ಥಿ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಲಕ್ಷ್ಮೀ ಕ್ಯಾಂಪಿನ 184, 185 ಮತ್ತು 186 ಮತಗಟ್ಟೆಯಲ್ಲಿ ಜನಾರ್ದನ ರೆಡ್ಡಿ ತಮ್ಮ ಬೆಂಬಲಿಗರೊಂದಿಗೆ ಮತಗಟ್ಟೆಗೆ ತೆರಳಿ ಚಿಹ್ನೆ ತೋರಿಸಿ ಮತ ಹಾಕುವಂತೆ ಕೋರಿದ್ದ ಹಿನ್ನೆಲೆಯಲ್ಲಿ ಫ್ಲೈಯಿಂಗ್‌ ಸ್ಕಾ$್ವಡ್‌ ಅಧಿಕಾರಿ ಸನಿತ್‌ ಅವರು ನೀಡಿದ ದೂರಿನ ಮೇರೆಗೆ ಜನಾರ್ದನ ರೆಡ್ಡಿ ಸೇರಿದಂತೆ 12 ಜನರ ಮೇಲೆ ನಗರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಅಡೆವೆಪ್ಪ ಅವರು ದೂರು ದಾಖಲಿಸಿ, ಸ್ಕಾರ್ಪಿಯೋ ವಾಹನ ಜಪ್ತಿ ಮಾಡಿದ್ದಾರೆ.

Support if Siddaramaiah is likely to become CM