ನವದೆಹಲಿ :  ಐಸಿಸ್‌ ಉಗ್ರರ ಕಥಾಹಂದರದ ‘ದ ಕೇರಳ ಸ್ಟೋರಿ’ ಚಿತ್ರವು ಶುಕ್ರವಾರ 37 ವಿವಿಧ ದೇಶಗಳಲ್ಲಿ ಬಿಡುಗಡೆಯಾಗಲಿದೆ. ಕಳೆದ ಶುಕ್ರವಾರ ಭಾರತಾದ್ಯಂತ ತೆರೆಕಂಡಿದ್ದ ಚಿತ್ರವು ಬಿಡುಗಡೆಯಾದ 6 ದಿನಗಳಲ್ಲಿ 56 ಕೋಟಿ ರು. ಗಳಿಕೆ ಮಾಡಿದೆ.

ಈ ಕುರಿತು ಟ್ವೀಟ್‌ ಮಡಿರುವ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ನಟಿ ಅದಾ ಶರ್ಮಾ ‘ನಮ್ಮ ಸಿನಿಮಾ ವೀಕ್ಷಿಸಿ ಅದನ್ನು ಟ್ರೆಂಡ್‌ ಮಾಡುತ್ತಿರುವ ಹಾಗೂ ನನ್ನ ನಟನೆಯನ್ನು ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು. ಇದೇ 12ರಂದು ‘ದ ಕೇರಳ ಸ್ಟೋರಿ’ 37 ವಿವಿಧ ದೇಶಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

ನಿರ್ದೇಶಕ ಸುದೀಪ್ತೋ ಸೇನ್‌ ನಿರ್ದೇಶಿಸಿ ವಿಫುಲ್‌ ಶಾ ನಿರ್ಮಿಸಿರುವ ಚಿತ್ರವು ಕೇರಳದ 32,000 ಹಿಂದೂ ಯುವತಿಯರನ್ನು ಪ್ರೀತಿಯ ಜಾಲದಲ್ಲಿ ಸಿಲುಕಿಸಿ ಇಸ್ಲಾಂಗೆ ಮತಾಂತರಿಸಿ ಸಿರಿಯಾ, ಅಷ್ಘಾನಿಸ್ತಾನದಂತಹ ರಾಷ್ಟ್ರಗಳಿಗೆ ಕಳುಹಿಸಿ ಅಲ್ಲಿ ಐಸಿಸ್‌ಗೆ ಸೇರಿಸಲಾಗಿದೆ. ಅವರನ್ನು ಆತ್ಮಾಹುತಿ ಬಾಂಬ್‌ ದಾಳಿಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಕಥಾ ಹೊಂದರವನ್ನು ಹೊಂದಿದೆ.

ಇದು ಭಾರತದಾದ್ಯಂತ ತೀವ್ರ ಪರ ವಿರೋಧದ ಚರ್ಚೆಗೆ ಗ್ರಾಸವಾಗಿದ್ದು, ಈಗಾಗಲೇ ಕೆಲ ರಾಜ್ಯಗಳಲ್ಲಿ ಸಿನಿಮಾ ಬ್ಯಾನ್‌ ಮಾಡಲಾಗಿದ್ದು ಕೆಲವೆಡೆ ತೆರಿಗೆ ಮುಕ್ತವಾಗಿಸಲಾಗಿದೆ.

‘Kerala Story’ released in 37 foreign countries