ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಖರೀದಿಗೆ ಉತ್ತೇಜನ ನೀಡಬೇಕು ಎನ್ನುವ ಉದ್ದೇಶದಿಂದ ಆದಾಯ ತೆರಿಗೆ ನಿಯಮದ ಸೆಕ್ಷನ್ 80ಇಇಬಿ ಅನ್ವಯ ₹ 1,50,000 ಮೊತ್ತಕ್ಕೆ ತೆರಿಗೆ ವಿನಾಯ್ತಿಯನ್ನು ಸರ್ಕಾರ ಘೋಷಿಸಿದೆ. ದ್ವಿಚಕ್ರ ವಾಹನ ಮತ್ತು ಕಾರುಗಳ ಖರೀದಿಗೂ ಈ ವಿನಾಯ್ತಿ ಅನ್ವಯವಾಗಲಿದೆ.

ನೀವು ಖಾಸಗಿ ಅಂದರೆ ವೈಯಕ್ತಿಕ ತೆರಿಗೆದಾರರಾಗಿದ್ದರೆ ಮಾತ್ರ ಈ ವಿನಾಯ್ತಿ ಸಿಗಲಿದೆ. ಹಿಂದೂ ಅವಿಭಜಿತ ಕುಟುಂಬ, ಪಾಲುದಾರಿಕೆ ಸಂಸ್ಥೆ, ಕಂಪನಿ ಅಥವಾ ಇತರ ಯಾವುದೇ ರೀತಿಯ ತೆರಿಗೆ ಪಾವತಿದಾರರಾಗಿದ್ದರೆ ನಿಮಗೆ ಎಲೆಕ್ಟ್ರಿಕ್ ವಾಹನ ಖರೀದಿಸಿದ್ದಕ್ಕೆ ತೆರಿಗೆ ವಿನಾಯ್ತಿ ಸಿಗುವುದಿಲ್ಲ.

ಒಮ್ಮೆ ಮಾತ್ರ ಈ ವಿನಾಯ್ತಿ ಪಡೆದುಕೊಳ್ಳಲು ಅವಕಾಶವಿದೆ. ಅಂದರೆ ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನ ಖರೀದಿ ಮಾಡುವ ವ್ಯಕ್ತಿ ಈ ತೆರಿಗೆ ವಿನಾಯ್ತಿ ಪಡೆದುಕೊಳ್ಳಬಹುದು. ನೀವು ಎಲೆಕ್ಟ್ರಿಕ್ ವಾಹನ ಖರೀದಿಸಲು ಸಾಲ ಪಡೆದ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಪಾವತಿ ಮಾಡುವ ಬಡ್ಡಿಗೆ ಮಾತ್ರ ಈ ವಿನಾಯ್ತಿ ಅನ್ವಯವಾಗುತ್ತದೆ. ಏಪ್ರಿಲ್ 1, 2019ರಿಂದ ಮಾರ್ಚ್ 31, 2023ರ ಅವಧಿಯಲ್ಲಿ ಕಟ್ಟುವ ಎಲೆಕ್ಟ್ರಿಕ್ ವಾಹನ ಖರೀದಿ ಸಾಲದ ಮೇಲಿನ ಬಡ್ಡಿಗೆ ಈ ವಿನಾಯ್ತಿ ಲಾಗೂ ಆಗುತ್ತದೆ. ನೀವು ಈಗಾಗಲೇ ಸಾಲದ ಮೇಲೆ ಎಲೆಕ್ಟ್ರಿಕ್ ವಾಹನ ಖರೀದಿಸಿದ್ದಲ್ಲಿ ಈ ವರ್ಷದ ತೆರಿಗೆ ಪಾವತಿಗೆ, ಅಂದರೆ 2021-22ರ ಆರ್ಥಿಕ ವರ್ಷದಲ್ಲಿ ಕಟ್ಟುವ ಸಾಲದ ಮೇಲಿನ ಬಡ್ಡಿಗೆ ತೆರಿಗೆ ವಿನಾಯ್ತಿ ಪಡೆದುಕೊಳ್ಳಬಹುದಾಗಿದೆ.

ನೀವು ₹ 7.46 ಲಕ್ಷ ಮೌಲ್ಯದ ಒಂದು ಎಲೆಕ್ಟ್ರಿಕ್ ಕಾರ್ ಖರೀದಿ ಮಾಡಿದ್ದೀರಿ ಎಂದಿಟ್ಟುಕೊಳ್ಳೋಣ. ಮಹೀಂದ್ರ ಕಂಪನಿಯ e2o plus P4 ಎಲೆಕ್ಟ್ರಿಕ್ ವಾಹನ ಇದೇ ಬೆಲೆಗೆ ಸಿಗುತ್ತದೆ. ಶೇ 10.25ರ ಬಡ್ಡಿದರದಲ್ಲಿ ನೀವು ಸಾಲ ಪಡೆದುಕೊಂಡರೆ ನಿಮ್ಮ ಮಾಸಿಕ ಇಎಂಐ ₹ 15,947 ಆಗುತ್ತದೆ. ಇದರಲ್ಲಿ ₹ 9,500 ಅಸಲಿಗೆ ಹೋದರೆ ₹ 6,374 ಬಡ್ಡಿಗೆ ಹೋಗುತ್ತದೆ. ಒಂದು ಆರ್ಥಿಕ ವರ್ಷದಲ್ಲಿ ಬಡ್ಡಿ ಕಟ್ಟಲು ನೀವು ಎಷ್ಟು ಹಣ ವ್ಯಯಿಸಿದಿರಿ ಎನ್ನುವ ಲೆಕ್ಕಾಚಾರ ಆಧರಿಸಿ ನಿಮಗೆ ಅದರ ಸಂಪೂರ್ಣ ಮೊತ್ತಕ್ಕೆ ತೆರಿಗೆ ವಿನಾಯ್ತಿ ಸಿಗುತ್ತದೆ.

ಪ್ಯಾರೀಸ್​ನ ಹವಾಮಾನ ಘೋಷಣೆಯ ನಂತರ ಭಾರತ ಸರ್ಕಾರವು ಎಲೆಕ್ಟ್ರಿಕ್ ವಾಹನ ಖರೀದಿಗೆ ಹೆಚ್ಚು ಉತ್ತೇಜನ ನೀಡುತ್ತಿದೆ. ರಾಜ್ಯ ಸರ್ಕಾರಗಳು ರಿಯಾಯ್ತಿ, ಸಬ್ಸಿಡಿಗಳನ್ನು ಘೋಷಿಸಬೇಕೆಂದು ಸೂಚನೆ ನೀಡಿದೆ. ರಿಜಿಸ್ಟ್ರೇಶನ್ ಅಥವಾ ನವೀಕರಣ ಸಮಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಶುಲ್ಕ ವಿನಾಯ್ತಿಯನ್ನು ಸಾರಿಗೆ ಇಲಾಖೆ ಕಳೆದ ಆಗಸ್ಟ್ ತಿಂಗಳಲ್ಲಿ ಘೋಷಿಸಿತ್ತು.

ಇದನ್ನೂ ಓದಿ: Electric Scooters: ಭಾರತದ ಟಾಪ್ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಇದರ ಜೊತೆಗೆ ಸರ್ಕಾರವು ಶೇ 5ರ ಜಿಎಸ್​ಟಿ ವಿನಾಯ್ತಿಯನ್ನೂ ಘೋಷಿಸಿದೆ. FAME-2 ಯೋಜನೆಯ ಅನ್ವಯ ಕಾರ್​ಗಳಿಗೆ ₹ 1.5 ಲಕ್ಷದಷ್ಟು, ದ್ವಿಚಕ್ರ ವಾಹನಗಳಿಗೆ ಶೇ 40ರಷ್ಟು ಸಬ್ಸಿಡಿ ಪಡೆದುಕೊಳ್ಳಲು ಅವಕಾಶವಿದೆ. ಬಹುತೇಕ ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿಗಳು ಈ ಸಬ್ಸಿಡಿ ಕ್ಲೇಮ್ ಮಾಡಿಕೊಂಡ ನಂತರದ ಮೊತ್ತವನ್ನೇ ಗ್ರಾಹಕರಿಂದ ಪಡೆದುಕೊಳ್ಳುತ್ತಿವೆ. ಹೀಗಾಗಿ ಸಹಾಯಧನ ಘೋಷಣೆಯಾದ ನಂತರ ಎಲೆಕ್ಟ್ರಿಕ್ ವಾಹನಗಳ ಬೆಲೆಯೂ ತುಸು ಕಡಿಮೆಯಾಗಿದೆ. ಇದರ ಜೊತೆಗೆ ಕೆಲ ರಾಜ್ಯ ಸರ್ಕಾರವು FAME-2 ಹೊರತುಪಡಿಸಿದ ಒಂದಿಷ್ಟು ಸಬ್ಸಡಿಗಳನ್ನು ಘೋಷಿಸಿದೆ. ದೆಹಲಿ, ಗುಜರಾತ್, ಅಸ್ಸಾಮ್, ಬಿಹಾರ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಗರಿಷ್ಠ ₹ 1.5 ಲಕ್ಷದಷ್ಟು ಸಬ್ಸಿಡಿ ಪಡೆದುಕೊಳ್ಳಲು ಅವಕಾಶವಿದೆ. ಕರ್ನಾಟಕದಲ್ಲಿ ರಸ್ತೆ ತೆರಿಗೆ ಪಾವತಿಯಿಂದ ಎಲೆಕ್ಟ್ರಿಕ್ ವಾಹನಗಳಿಗೆ ಸಂಪೂರ್ಣ ವಿನಾಯ್ತಿಯಿದೆ.

ಇದನ್ನೂ ಓದಿ: WhatsApp Payments : ನಿಮ್ಮ ಬ್ಯಾಂಕ್‌ ಬ್ಯಾಲೆನ್ಸ್‌ ಅನ್ನು ವಾಟ್ಸಾಪ್‌ ಪೆಮೆಂಟ್‌ ಮೂಲಕವೂ ಪರಿಶೀಲಿಸಬಹುದು ಹೇಗೆಂದರೆ…

(Tax Benefits on Electric Vehicle)