ರಬಕವಿ-ಬನಹಟ್ಟಿ:  ಬಾಗಲಕೋಟೆ ಜಿಲ್ಲೆಯ ತೇರದಾಳ ಮತಕ್ಷೇತ್ರ ಕಾಂಗ್ರೆಸ್‌ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸುತ್ತಿದೆ. ಪಕ್ಷದಲ್ಲಿ ಆಂತರಿಕ ಭಿನ್ನಮತ ಭುಗಿಲೆದ್ದಿದೆ. ವಲಸಿಗ ಅಭ್ಯರ್ಥಿ ವಿರುದ್ಧ ಕಾರ್ಯಚಟುವಟಿಕೆ ಬಿರುಸಾಗಿದೆ. ತೇರದಾಳದಲ್ಲಿ ‘ಕಾಂಗ್ರೆಸ್‌ ಬಚಾವೋ..ಉಮಾಶ್ರೀ ಹಠಾವೋ’ ಚಳವಳಿ ರೂಪದ ಹೋರಾಟಕ್ಕೆ ಧುಮುಕಿದ್ದಾರೆ ಸ್ಥಳೀಯ ಕಾಂಗ್ರೆಸ್‌ ಕಾರ್ಯಕರ್ತರು.

ಭಾನುವಾರ ಕೆಲವೆಡೆ ಸಭೆ, ಪತ್ರಿಕಾಗೋಷ್ಠಿ ನಡೆಸಿ ವಲಸಿಗ ಅಭ್ಯರ್ಥಿಗೆ ಟಿಕೆಟ್‌ ಕೊಟ್ಟರೆ ಚುನಾವಣೆಯಿಂದ ದೂರ ಉಳಿಯುತ್ತೇವೆ ಎಂದು ಎಚ್ಚರಿಸಿದ್ದ ಕಾರ್ಯಕರ್ತರು ಸೋಮವಾರ ಅದಾಗಲೇ ಬೀದಿಗೆ ಇಳಿದಿದ್ದಾರೆ. ಯಾವುದೇ ಕಾರಣಕ್ಕೂ ಮಾಜಿ ಸಚಿವೆ ಉಮಾಶ್ರೀ ಅವರಿಗೆ ಟಿಕೆಟ್‌ ಘೋಷಿದಂತೆ ಹೈಕಮಾಂಡ್‌ ಮೇಲೆ ಒತ್ತಡ ಹೇರುವ ತಂತ್ರವಾಗಿ ಬೃಹತ್‌ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್‌ ಬಚಾವೋ, ಉಮಾಶ್ರೀ ಹಟಾವೋ ಘೋಷಣೆ ಕೂಗುತ್ತಲೇ ರಾಜ್ಯ ಹೆದ್ದಾರಿಯಲ್ಲಿ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕುತ್ತ ಉಮಾಶ್ರೀ ವಿರೋಧಿ ಅಲೆಯನ್ನು ಕಾಂಗ್ರೆಸ್‌ ಹೈಕಮಾಂಡ್‌ಗೆ ರವಾನಿಸುವ ಪ್ರಯತ್ನ ಮಾಡಿದರು. ಈ ಮೂಲಕ ಹೊರಗಿನ ಯಾವುದೇ ಅಭ್ಯರ್ಥಿಗೆ ಇಲ್ಲಿ ಟಿಕೆಟ್‌ ನೀಡಿದರೆ ಬೆಂಬಲಿಸುವುದಿಲ್ಲ ಎಂಬ ಸೂಚ್ಯ ಸಂದೇಶ ನೀಡಿದ್ದಲ್ಲದೆ, ಸ್ಥಳೀಯ ಅಭ್ಯರ್ಥಿ ಡಾ.ಪದ್ಮಜೀತ ಪರ ಧ್ವನಿ ಎತ್ತಿದರು.

ಪ್ರತಿಭಟನೆ ವೇಳೆ, ಕಾಂಗ್ರೆಸ್‌ ಮುಖಂಡ ರವೀಂದ್ರ ಬಾಡಗಿ ಮಾತನಾಡಿ, ಉಮಾಶ್ರೀ 2008ರಲ್ಲಿ 12,224 ಮತಗಳಿಂದ ಪರಾಭವಗೊಂಡರು. 2018ರಲ್ಲೂ 22,254 ಮತಗಳಿಂದ ಪರಾಭವಗೊಂಡಿದ್ದರು. ಈಗ ಅವರಿಗೇ ಟಿಕೆಟ್‌ ನೀಡಿದ್ದೇ ಆದಲ್ಲಿ ತೇರದಾಳ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸೋಲು ಖಚಿತ ಎಂದು ಎಚ್ಚರಿಸಿದರು.

2013ರ ಚುನಾವಣೆಯಲ್ಲಿ ಗೆದ್ದ ಬಳಿಕ ಉಮಾಶ್ರೀ ಅವರು ಸ್ಥಳೀಯ ಕಾರ್ಯಕರ್ತರಿಗೆ ಬಹಳಷ್ಟು ಅನ್ಯಾಯ ಮಾಡಿದ್ದಾರೆ. ನಿಷ್ಠಾವಂತ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ಹಾಗಾಗಿ ಈ ಬಾರಿ ಯವುದೇ ಕಾರಣಕ್ಕೂ ಟಿಕೆಟ್‌ ನೀಡಬಾರದು ಎಂದು ಆಗ್ರಹಿಸಿದರು.

ಉಮಾಶ್ರೀ ಕಳೆದ ಐದು ವರ್ಷಗಳಿಂದ ಕ್ಷೇತ್ರದಲ್ಲಿ ಯಾವುದೇ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಜನರ ವಿಶ್ವಾಸ ಗಳಿಸುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಸ್ಥಳೀಯ ಅಭ್ಯರ್ಥಿಗೇ ಟಿಕೆಟ್‌ ನೀಡಬೇಕು. ಹೈಕಮಾಂಡ್‌ ಎಚ್ಚೆತ್ತುಕೊಳ್ಳದೇ ಇದ್ದರೆ ತೇರದಾಳ ಮತಕ್ಷೇತ್ರದಲ್ಲಿ ಇನ್ನಷ್ಟುಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಬಕವಿ-ಬನಹಟ್ಟಿ, ತೇರದಾಳ, ಹಳಿಂಗಳಿ, ಹನಗಂಡಿ, ಯರಗಟ್ಟಿ, ಸಸಾಲಲಟ್ಟಿ, ಗೊಲಭಾವಿ, ಕಾಲತಿಪ್ಪಿ ಗ್ರಾಮಗಳ ಕಾಂಗ್ರೆಸ್‌ ಕಾರ್ಯಕರ್ತರು ತೇರದಾಳ ಪಟ್ಟಣದ ಮುಖ್ಯ ರಸ್ತೆಯಲ್ಲೇ ಜಮಾಯಿಸಿ ಬಹಿರಂಗ ಸಭೆ ಸಹ ನಡೆಸಿದರು. ಯಾವುದೇ ಕಾರಣಕ್ಕೂ ಉಮಾಶ್ರೀ ಅವರಿಗೆ ಟಿಕೆಟ್‌ ನೀಡದೆ ಸ್ಥಳೀಯ ಅಭ್ಯರ್ಥಿ ಡಾ.ಪದ್ಮಜೀತ ನಾಡಗೌಡ ಪಾಟೀಲ ಅವರಿಗೆ ನೀಡಬೇಕೆಂದು ಆಗ್ರಹಿಸಿದರು.

ಡಾ.ಪದ್ಮಜೀತ ನಾಡಗೌಡ ಪಾಟೀಲ ಕ್ಷೇತ್ರದೆಲ್ಲೆಡೆ ಚಿರಪರಿಚಿತರು ಮತ್ತು ಸ್ವಂತ ಹಣದಲ್ಲಿ ಕಾರ್ಯಕರ್ತರನ್ನು ಸಂಘಟಿಸಿ ಮತ್ತೆ ಪಕ್ಷಕ್ಕೆ ಚೈತನ್ಯ ತುಂಬುವ ಕೆಲಸ ಮಾಡಿದ್ದಾರೆ. ಇವರಿಗೆ ಟಿಕೆಟ್‌ ನೀಡಿ ಎಂದು ಕಾಂಗ್ರೆಸ್‌ ಮುಖಂಡರಾದ ನೀಲೇಶ ದೇಸಾಯಿ, ರಾಜು ನಂದೆಪ್ಪನವರ, ಮಲ್ಲಿನಾಥ ಬೋಳಗೊಂಡ ಮತ್ತು ಜಿನ್ನಪ್ಪ ಹೊಸೂರ ಸಭೆಯಲ್ಲಿ ಹಕ್ಕೊತ್ತಾಯ ಮಂಡಿಸಿದರು. ವಲಸಿಗ ಅಭ್ಯರ್ಥಿಗೆ ನೀಡಿದ್ದೇ ಆದರೆ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸುವ ನಿರ್ಣಯ ಕೈಗೊಂಡರು.

ಈ ಸಂದರ್ಭದಲ್ಲಿ ಮಹಾವೀರ ಬಣಜವಾಡ, ಸುನೀಲ ಪಾಟೀಲ, ಸುಜೀತ ದಾನಿಗೊಂಡ, ಶೇರಲಿ ಕೊರಬು, ಮಲ್ಲಪ್ಪ ನಾರಿಗೊಂಡ, ಪ್ರಭು ಹಿಪ್ಪರಗಿ, ಅನಿಲ ಬಣಜವಾಡ, ಪ್ರಭು ಮಾಂಗ, ಪ್ರಕಾಶ ನಾರವಗೋಳ, ಶುಭಂ ದೇಸಾಯಿ, ಕುಮಾರ ಕಾಂಬಳೆ, ಸಿದ್ದು ಉಳಗೊಂಡ, ಸುಮಿತ ಬುರ್ಗಿ, ಗಣೇಶ ಬೋದೆನ್ನವರ, ಸದಾಶಿವ ಬೋದೆನ್ನವರ, ಧರೆಪ್ಪ ಹಿಪ್ಪರಗಿ, ಬಸವರಾಜ ತೇಲಿ, ಸಚಿನ್‌ ಮಡಿವಾಳ, ಜಿನೇಂದ್ರ ಕಲ್ಲೊಳ್ಳಿ ಸೇರಿದಂತೆ ನೂರಾರು ಕಾರ್ಯಕರ್ತರಿದ್ದರು.

ಬನಹಟ್ಟಿಯಂತೆ ರಬಕವಿಯಲ್ಲಿಯೂ ಸೋಮವಾರ ಉಮಾಶ್ರೀ ವಿರುದ್ಧ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ರಾಜು, ನದಾಫ್‌, ಕುಬೇರ ಸಾರವಾಡ, ಮಹೇಶ ಮಲಾಬಾದಿ, ಪಕ್ಕು ಜಿಗಜಿನ್ನಿ, ಮಾಳು ಹಿಪ್ಪರಗಿ, ಕರಬಸು ಆರಗಿ, ಕುಮಾರ ಬಿಳ್ಳೂರ, ಚಿದಾನಂದ ಮಟ್ಟಿಕಲ್ಲಿ, ಕಲ್ಲಪ್ಪ ಕರಲಟ್ಟಿ, ಬಸು ಕೊಪ್ಪದ, ಮಲ್ಲಪಪ್‌ ಕಾಂಬಳೆ, ಗಿರಮಲ್ಲಪ್ಪ ಹಿತ್ತಲಮನಿ, ರಫಿಕ್‌ ಪೆಂಡಾರಿ, ಮೌಲಾ ತೇರದಾಳ, ಓಂಪ್ರಕಾಶ ಮನಗೂಳಿ, ಸಂತೋಷ ಚವ್ವನವರ, ಬಸಯ್ಯ ಕತ್ತಿ, ಯಲ್ಲಪ್ಪ ಕರಿಗಾರ, ಸುಬಾಸ ಮಡ್ಡಿಮನಿ, ಚನ್ನಪ್ಪ ಹರಿಜನ, ರಾಜು ಬೀಳಗಿ, ಸಚೀನ ಕಾಡದೇವರ, ಮಹಾದೇವ ಕೋಪರ್ಡೆ, ಅಸ್ಲಂ ಕುಳ್ಳೋಳ್ಳಿ, ಮೆಹಬೂಬ್‌ ಮುಲ್ಲಾ ಅನೇಕರು ಇದ್ದರು.

ರಬಕವಿ-ಬನಹಟ್ಟಿ: ಮಾಜಿ ಸಚಿವೆ ಉಮಾಶ್ರೀ ನೇಕಾರ ಸಮುದಾಯದವರೇ ಅಲ್ಲ. ಹಾಗಿದ್ದರೂ ನೇಕಾರರ ಹೆಸರು ಹೇಳಿ 2008ರಿಂದಲೂ ತೇರದಾಳ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಪಡೆದಿದ್ದಾರೆ ಎಂದು ಹಟಗಾರ ಸಮಾಜದ ಜಿಲ್ಲಾಧ್ಯಕ್ಷ, ದೇವರ ದಾಸಿಮಯ್ಯ ಸೇವಾ ಸಂಘದ ಅಧ್ಯಕ್ಷ ಡಾ.ಪಿ.ವಿ.ಪಟ್ಟಣ ಗಂಭೀರ ಆರೋಪ ಮಾಡಿದ್ದಾರೆ.

ಬನಹಟ್ಟಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೇಕಾರ ಸಮುದಾಯದ ಮೇಲೆ ನಿರಂತರ ಗದಾಪ್ರಹಾರ ನಡೆಯುತ್ತಲೇ ಇದ್ದು, ಈ ಬಾರಿ ಕಾಂಗ್ರೆಸ್‌ ಹೈಕಮಾಂಡ್‌ ನಿರ್ಲಕ್ಷ್ಯ ತೋರಿದರೆ ಪಕ್ಷಕ್ಕೆ ಹಾನಿ ಕಟ್ಟಿಟ್ಟಬುತ್ತಿ. ಹಾಗಾಗಿ ನೈಜ ನೇಕಾರ ಸಮುದಾಯದವರಿಗೆ ಟಿಕೆಟ್‌ ನೀಡಬೇಕು. ಡಾ.ಎಂ.ಎಸ್‌.ದಡ್ಡೇನವರ ಅವರಿಗೆ ಟಿಕೆಟ್‌ ನೀಡಿದಲ್ಲಿ ನಿರಾಯಾಸದ ಗೆಲುವು ಕಾಂಗ್ರೆಸ್‌ನದ್ದಾಗಲಿದೆ ಎಂದು ಹೇಳಿದರು.

ಮಹಾದೇವ ಜಕ್ಕನವರ ಮಾತನಾಡಿ, ಪಕ್ಷದ ಆಂತರಿಕ ವಿಚಾರಕ್ಕೆ ಅನುಗುಣವಾಗಿ ಅಭ್ಯರ್ಥಿ ಆಯ್ಕೆ ಅನಿವಾರ್ಯವಾಗಿದ್ದು, ಪಕ್ಷದಿಂದ ಬಂಡಾಯ ಏಳುವುದಿಲ್ಲ. ಆದರೆ, ಪಕ್ಷಕ್ಕೆ ವಿನಾಕಾರಣ ಸೋಲಾಗಲಿದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಮಹಾದೇವ ಮೇತ್ರಿ, ಪ್ರಕಾಶ ಕಣಗೊಂಡ, ಮಲ್ಲಣ್ಣ ಬಾವಲತ್ತಿ, ವಿಜಯ ಹುಡೇದಮನಿ, ಸಂಜಯ ಕಿತ್ತೂರ, ಸಿದ್ಲಿಂಗ ನಾಗರಾಳ ಇದ್ದರು.

Teradala Congress Bachao.. Umashree Hatao