ಚಿಕ್ಕಮಗಳೂರು:  ಲಿಂಗಾಯಿತರಿಗೆ ಪ್ರಾಮುಖ್ಯತೆ ನೀಡಬೇಕಿಲ್ಲ ಎಂದು ಬಿಜೆಪಿಯ ಶಾಸಕ ಸಿಟಿ ರವಿ ಹೇಳಿಕೆ ನೀಡಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದ ಮೂವರ ವಿರುದ್ಧ ದೂರು ದಾಖಲಾಗಿದೆ. ಈ ಕುರಿತು ಚಿಕ್ಕಮಗಳೂರಿನ ಬಸವನಹಳ್ಳಿ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬಿಸಿದ್ದ ಮೂವರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಲಿಂಗಾಯತರಿಗೆ ಪ್ರಾಮುಖ್ಯತೆ ನೀಡಬೇಕಿಲ್ಲ ಎಂದಿದ್ದಾರೆ ಎಂದು ನಕಲಿ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ದೂರು ನೀಡಿದ್ದರು. ಈ ಸಂಬಂಧ ದಾವಣಗೆರೆ ಮೂಲದ ಹರೀಶ್, ಗುರುಪಾಟೀಲ್ ಹಾಗೂ ತುಮಕೂರು ಮೂಲದ ಸುವರ್ಣಗಿರಿ ವಿರುದ್ಧ ಚಿಕ್ಕಮಗಳೂರು ನಗರದ ಬಸವನಹಳ್ಳಿ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಈ ಮೂವರು ಕಾಂಗ್ರೆಸ್ನ ಐಟಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಾಸಕ ಸಿ. ಟಿ ರವಿ ‘ಲಿಂಗಾಯಿತರಿಗೆ ಪ್ರಾಮುಖ್ಯತೆ ಕೊಡಬೇಕಿಲ್ಲ’ ಎಂದು ಹೇಳಿದ್ದಾರೆ ಎನ್ನಲಾದ ಪೇಪರ್ ಕಟ್ಟಿಂಗ್ ಒಂದು ರಾಜ್ಯಾದ್ಯಂತ ವೈರಲ್ ಆಗಿತ್ತು. ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಂಚಲನ ಮೂಡಿಸಿ ವಿವಾದಕ್ಕೂ ಕಾರಣವಾಗಿತ್ತು. ಲಿಂಗಾಯಿತರ ಕುರಿತಾಗಿ ಯಾವುದೇ ಪತ್ರಿಕಾ ಪ್ರಕಟಣೆಯನ್ನು ಸಿಟಿ ರವಿ ನೀಡಿರಲಿಲ್ಲ. ಆದ್ರೆ ವೀರಶೈವ ಲಿಂಗಾಯತರಿಗೆ ಪ್ರಾಮುಖ್ಯತೆ ನೀಡಬೇಕಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿಕೆ ನೀಡಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿತ್ತು.

ಅಲ್ಲದೇ ಆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಯಾಗಿತ್ತು. ಈ ನಕಲಿ ಪೇಪರ್ ಕಟ್ಟಿಂಗ್ ವೈರಲ್ ಆಗುತ್ತಿದ್ದಂತೆ ವೀರಶೈವ ಲಿಂಗಾಯತ ಸಮುದಾಯ ಸಿಟಿ ರವಿ ವಿರುದ್ಧ ಸಿಡಿದೆದ್ದಿತ್ತು.ಚುನಾವಣೆ ಪ್ರಚಾರದಲ್ಲಿ ಕಂಡು ಬಂದರೆ ಮುತ್ತಿಗೆ ಹಾಕಬೇಕೆಂದು ವೀರಶೈವ ಲಿಂಗಾಯತ ಸಮುದಾಯ ಪತ್ರಿಕಾ ಪ್ರಕಟಣೆ ಮೂಲಕ ಕರೆ ಕೊಟ್ಟಿತ್ತು. ರವಿ ಅವರು ಲಿಂಗಾಯತ ಸಮಾಜದ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಒಂದು ವಾರದಲ್ಲಿ ಅವರ ಮನೆಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು ಎಂದು ಕೂಡ ಎಚ್ಚರಿಕೆ ನೀಡಿತ್ತು. ಈ ಸುದ್ದಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಸಿಟಿ ರವಿ ದಿಢೀರ್ ಸುದ್ದಿಗೋಷ್ಠಿ ನಡೆಸಿ ಇದು ಕಾಂಗ್ರೆಸ್ ನ ಫೇಕ್ ಫ್ಯಾಕ್ಟರಿಯಿಂದ ಬಂದ ಸುಳ್ಳು ಸುದ್ದಿ, ಈ ಕುರಿತು ನಾನು ದೂರು ದಾಖಲಿಸುತ್ತೇನೆ. ಇದು ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟನೆ ನೀಡಿದ್ದರು.

ಎಫ್ ಐ ಆರ್ ದಾಖಲಾಗಿರುವ ಬಗ್ಗೆ ಮಾಹಿತಿ ನೀಡಿದ ಚಿಕ್ಕಮಗಳೂರು  ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ಕಾಂಗ್ರೆಸ್ ಪಕ್ಷ ಸುಳ್ಳು ಸುದ್ದಿ ಹರಡಿ ಜಾತಿ ಆಧಾರದ ಮೇಲೆ ಚುನಾವಣೆ ಮಾಡಲು ಹೊರಟಿತ್ತು ಎಂದು ಆಪಾದಿಸಿದ್ದಾರೆ. ಪ್ರಕಟಿತ ಸುದ್ದಿಯ ಸತ್ಯಾ ಸತ್ಯತೆ  ಪರಿಶೀಲಿಸಿ ಪ್ರಕರಣದ ದಾಖಲಿಸುವಂತೆ ಜಿಲ್ಲಾ ರಕ್ಷಣಾಧಿಕಾರಿಗೆ ದೂರನ್ನು ಸಲ್ಲಿಸಿದ್ದು   ಐಟಿ ಸೆಲ್‌ನ ಕಾರ್ಯದರ್ಶಿ ಹರೀಶ್ ಕೆಂಗಲಹಳ್ಳಿ ,ಕಾಂಗ್ರೆಸ್‌ನ ಮುಖಂಡ ಗುರು ಪಾಟೀಲ್ , ಯುವ ಕಾಂಗ್ರೆಸ್‌ನ ಕಾರ್ಯದರ್ಶಿಸುವರ್ಣ ಗಿರಿಕುಮಾರ್   ಸುಳ್ಳು ಸುದ್ದಿ ಹರಿಬಿಟ್ಟಿರುವುದು ಸಾಬೀತಾಗಿ ಮೂವರ ಮೇಲು ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಇವತ್ತು ಅಭಿವೃದ್ಧಿಯ ಬಗ್ಗೆ ಚರ್ಚೆಯನ್ನು ಮಾಡಲಿಕ್ಕೆ ಸಾಧ್ಯವಾಗದೇ  ಜಾತಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ, ವೀರಶೈವ ಲಿಂಗಾಯಿತರು ಇಂತಹ ಸುಳ್ಳು ಸುದ್ದಿಗಳಿಗೆ ಮಾರುಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು

Case against those who spread false news in the name of City Ravi