ಚಿಕ್ಕಮಗಳೂರು: ಸಂಸದೆ ಶೋಭಾ ಕರಂದ್ಲಾಜೆ ಕ್ಷೇತ್ರವನ್ನು ಕಡೆಗಣಿಸಿದ್ದಾರೆ, ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ ಎಂಬ ಕಾರಣಕ್ಕಾಗಿ ಬಿಜೆಪಿಯವರೇ ಗೋ ಬ್ಯಾಕ್ ಶೋಭಾ ಎಂದು ಕರೆ ನೀಡಿದ್ದರು. ಇದು, ಪ್ರಧಾನಿ ನರೇಂದ್ರ ಮೋದಿಯವರ ವೈಫಲ್ಯ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಅಂಶುಮಂತ್ ಆರೋಪಿಸಿದ್ದಾರೆ.

ಜಿಲ್ಲೆಯಲ್ಲಿ ರೈತರ ಹಾಗೂ ಕಾಫಿ ಬೆಳೆಗಾರರ ಗಂಭೀರ ಸಮಸ್ಯೆಗಳು ಇವೆ. ಅವುಗಳನ್ನು ಕೇಂದ್ರ ಸರ್ಕಾರದ ಗಮನ ಸೆಳೆದು ಪರಿಹಾರ ಮಾಡಲು ಕೇಂದ್ರದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಆಗಿದ್ದ ಶೋಭಾ ಕರಂದ್ಲಾಜೆ ಅವರಿಗೆ ಬಹಳಷ್ಟು ಅವಕಾಶ ಇತ್ತು. ಆ ನಿಟ್ಟಿನಲ್ಲಿ ಅವರು ಪ್ರಯತ್ನ ಮಾಡಲೇ ಇಲ್ಲ. ಸರ್ಫೇಸಿ ಆಕ್ಟ್‌ಗೆ ತಿದ್ದುಪಡಿ ತಂದು ಕಾಫಿ ಬೆಳೆಗಾರರನ್ನು ಉಳಿಸುವ ಕೆಲಸ ಮಾಡಲಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾಫಿ ಬೆಳೆಗಾರರಿಗೆ ಕಂದಾಯ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡುವ ಕೆಲಸ ಕಾಂಗ್ರೆಸ್ ಮಾಡಿತು. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ಸರ್ಫೇಸಿ ಕಾಯ್ದೆ ಮೂಲಕ ಭೂಮಿಯನ್ನು ಕಿತ್ತುಕೊಳ್ಳುವ ಕೆಲಸ ಮಾಡ್ತಾ ಇದೆ ಎಂದ ಅವರು, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ೨೫ ವರ್ಷಗಳಿಂದ ಬಿಜೆಪಿ ಪ್ರಾತಿನಿಧ್ಯ ಇತ್ತು. ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಲಿಲ್ಲ ಎಂದರು.

ಕೆ. ಜಯಪ್ರಕಾಶ್ ಹೆಗ್ಡೆ ಅವರು ಸಂಸದರಾಗಿದ್ದಾಗ ಚಿಕ್ಕಮಗಳೂರಿಗೆ ನೂತನ ರೈಲು ಬಂದಿತು. ನಂತರ ೧೦ ವರ್ಷ ಶೋಭಾ ಕರಂದ್ಲಾಜೆ ಇದ್ದರು ಹೊಸದಾಗಿ ರೈಲು ತರುವ ಕೆಲಸ ಆಗಲಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ಇದೆ ಎಂದ್ರು, ಅದರಿಂದ ಯಾವುದೇ ರೀತಿಯ ಅನುಕೂಲ ಆಗಲಿಲ್ಲ. ಈ ರೀತಿಯ ಹಲವು ವೈಫಲ್ಯತೆ ಇರುವುದರಿಂದ ಬಿಜೆಪಿಯವರಿಗೆ ಪ್ರಚಾರ ಮಾಡಲು ಯಾವುದೇ ವಿಚಾರ ಇಲ್ಲ ಎಂದು ಹೇಳಿದರು.

ಸುದ್ಧಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಂಜೇಗೌಡ, ರೂಬಿನ್ ಮೋಸಸ್, ಬಿ.ಎಚ್. ಹರೀಶ್, ತನೋಜ್ ನಾಯ್ಡು, ಹಿರೇಮಗಳೂರು ರಾಮಚಂದ್ರ ಇದ್ದರು.

The Lok Sabha constituency has not developed as expected