ಚಿಕ್ಕಮಗಳೂರು : ಕಳೆದ ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯ ಪೊಲೀಸರು ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಮಂಗಳವಾರ ರಾಮನಹಳ್ಳಿ ಡಿಎಆರ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್. ಅಕ್ಷಯ್ ಸಮ್ಮುಖದಲ್ಲಿ ನಡೆಯಿತು.

೪೧ ಲಕ್ಷಕ್ಕೂ ಹೆಚ್ಚು ಮೌಲ್ಯದ ೯೦೦ ಗ್ರಾಂ ಚಿನ್ನ, ೧೨ ಕೆ.ಜಿ ಬೆಳ್ಳಿ, ನಗದು, ಕಾರು, ಬೈಕ್, ಆಟೋ, ಮೊಬೈಲ್, ಲ್ಯಾಪ್‌ಟಾಪ್ ಒಳಗೊಂಡಂತೆ ೧.೧೪ ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್‍ ಉಪಕರಣ, ೭೦೦ ಕೆ.ಜಿ ಅಡಿಕೆ, ಇತರೆ ಸ್ವತ್ತುಗಳು ಸೇರಿದಂತೆ ಒಟ್ಟು ೭೭ ವಿವಿಧ ಪ್ರಕರಣಗಳಲ್ಲಿ ೮೨.೫೩ ಲಕ್ಷ ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಒಪ್ಪಿಸಲಾಯಿತು. ಕಳೆದುಕೊಂಡಿದ್ದ ಚಿನ್ನಾಭರಣ, ಬೈಕ್ ಮತ್ತಿತರ ವಸ್ತುಗಳು ಮರಳಿ ಸಿಕ್ಕಿದ್ದನ್ನು ಕಂಡು ಮಾಲೀಕರು ಹರ್ಷ ವ್ಯಕ್ತಪಡಿಸಿದರು.

ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್.ಅಕ್ಷಯ್ ಕಳ್ಳತನ ಪ್ರಕರಣ ಪತ್ತೇ ಹಚ್ಚುವುದಕ್ಕಿಂತ ಕಳವು ನಡೆಯದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಇಲಾಖೆ ವಿಶೇಷ ಕಾಳಜಿ ವಹಿಸಿದೆ. ರಾತ್ರಿ ಗಸ್ತು ಜತೆಗೆ ವಾರ್ಡ್ ಸಭೆಗಳನ್ನು ನಡೆಸಿ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಕುರಿತು ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ಇನ್ನು ದೇವಾಲಯದ ಆಡಳಿತ ಮಂಡಳಿ ಸಭೆಯನ್ನು ನಡೆಸಿ ಸಿಸಿ ಕ್ಯಾಮೆರಾ ಅಳವಡಿಸಲು ಸೂಚನೆ ನೀಡಲಾಗಿದೆ ಈಗಾಗಲೇ ಕೆಲವೆಡೆ ಕಾರ್ಯಗತವಾಗಿವೆ ಎಂದರು.

ಇದನ್ನೂ ಓದಿ: Police Martyrs’ Day: ಪೊಲೀಸರ ಕರ್ತವ್ಯ ನಿಷ್ಟೆಯಿಂದ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಿದೆ