ನವದೆಹಲಿ: ೮೦ನೇ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಮೋದಿ ಯುವಜನತೆಯನ್ನು ಬಣ್ಣಿಸಿದ್ದಾರೆ. ಯುವಜನತೆ ಏನಾದರೂ ಹೊಸತನ್ನು ಮಾಡುವ ಉತ್ಸಾಹದಲ್ಲಿದೆ, ರಿಸ್ಕ್ ತೆಗೆದುಕೊಂಡು ಮುನ್ನಡೆಯುತ್ತಿದೆ, ಸಂಪ್ರದಾಯಗಳನ್ನು ಮೀರಿ ಸಾಧಿಸುವ ಹುಮ್ಮಸ್ಸು ತೋರಿಸುತ್ತಾರೆ ಎಂದಿದ್ದಾರೆ.

ಭಾಷೆಗೆ ಸಂಬಂಧಿಸಿದಂತೆ ಹೊಸ ಅರಿವು ಬಂದಿದೆ. ಈಗ ನಮ್ಮ ಪರಂಪರೆಯನ್ನು ಉಳಿಸಿಕೊಳ್ಳಲು ಪ್ರಯತ್ನ ಹೆಚ್ಚಿಸಬೇಕು ಎನ್ನುವ ಮೂಲಕ ಗುಜರಾತ್ ನ  ಕೆವಾಡಿಯಾದಲ್ಲಿ ನಡೆಯುತ್ತಿರುವ ರೇಡಿಯೋ ಯೂನಿಟಿ- 90 ಎಫ್‌ ಎಂ ನ ಚಾನೆಲ್ ನ ರೇಡಿಯೋ ಜಾಕಿಗಳು ತಮ್ಮ ಕೇಳುಗರೊಂದಿಗೆ ಸಂಸ್ಕೃತ ಭಾಷೆಯಲ್ಲಿ ಸಂಭಾಷಣೆ ನಡೆಸುವ ಉದಾಹರಣೆ ನೀಡಿದ್ದಾರೆ.

ದೇಶದ ಜನರಿಗೆ ಕೃಷ್ಣ ಜನ್ಮಾಷ್ಟಮಿಯ ಶುಭಾಷಯ ಕೋರಿದ ಮೋದಿಯವರು ಮನ್ ಕಿ ಬಾತ್ ನಲ್ಲಿ ಹಲವಾರು ವಿಚಾರಗಳನ್ನು ಮುಕ್ತವಾಗಿ ಚರ್ಚಿಸಿದ್ದಾರೆ. ಒಲಿಂಪಿಕ್ಸ್‌ ಹಾಕಿಯಲ್ಲಿ ನಾವು 40 ವರ್ಷಗಳ ಬಳಿಕ ಪದಕ ಗೆದ್ದೆವು. ಮೇಜರ್ ಧ್ಯಾನ್ ಚಂದ್ ಅವರು ಇದ್ದಿದ್ದರೆ ಇಂದು ಎಷ್ಟು ಖುಪಿಪಡುತ್ತಿದ್ದರು ಎಂದು ಯಾರಾದರೂ ಊಹಿಸಬಲ್ಲಿರಾ?” ಎಂದು ನರೇಂದ್ರ ಮೋದಿ ಪ್ರಶ್ನಿಸಿದರು.

ಸ್ಟಾರ್ಟ್ ಅಪ್ ಸಂಸ್ಕೃತಿಯು ಸಣ್ಣ ಪಟ್ಟಣಗಳಲ್ಲಿಯೂ ವಿಸ್ತರಿಸುತ್ತಿದೆ. ಹೀಗಾಗಿ ಇದಕ್ಕೆ ಉಜ್ವಲ ಭವಿಷ್ಯವಿದೆ ಎಂದಿದ್ದಾರೆ. ಮನ್ ಕಿ ಬಾತ್ ನಲ್ಲಿನ ಇತರೆ ಕೆಲವು ಅಂಶಗಳು ಕೆಳಕಂಡಂತೆ ಇವೆ. ದೇಶದಲ್ಲಿ 62 ಕೋಟಿಗೂ ಹೆಚ್ಚು ಕೊರೊನಾ ಲಸಿಕೆ ಡೋಸ್ ಗಳನ್ನು ನೀಡಲಾಗಿದೆ. ಸ್ವಚ್ಛತೆಯಲ್ಲಿ ಇಂದೋರ್ ಗೆ ಈ ಬಾರಿಯೂ ಮೊದಲನೇ ಸ್ಥಾನ.

ಈ ವರ್ಷ ನಾವು ಪ್ರತಿದಿನ ಹೊಸ ನಿರ್ಣಯಗಳನ್ನು ತೆಗೆದುಕೊಳ್ಳಬೇಕು, ಹೊಸದನ್ನು ಯೋಚಿಸಬೇಕು ಮತ್ತು ಹೊಸದಕ್ಕಾಗಿ ನಮ್ಮ ಉತ್ಸಾಹವನ್ನು ಹೆಚ್ಚಿಸಬೇಕು. ಡಾ.ರಾಜೇಂದ್ರ ಪ್ರಸಾದ್ ಕೃಷಿ ವಿಶ್ವವಿದ್ಯಾಲಯ ಮತ್ತು ಬಿಹಾರದ ಮಧುಬನಿ ಜಿಲ್ಲೆಯ ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರದ ‘ಸುಖೇತ್ ಮಾಡೆಲ್’ ಉಪಕ್ರಮ ಗ್ರಾಮದ ಮಾಲಿನ್ಯವನ್ನು ಕಡಿಮೆ ಮಾಡಲಿದೆ.