ಬೆಂಗಳೂರು (ಕನ್ನಡನಾಡಿ ಸುದ್ದಿಜಾಲ):  ಪೋಲೀಸರ ಪರ್ಮೀಷನ್ ಸಹ ತೆಗೆದುಕೊಳ್ಳದೆ ರಾಮನಗರದ ಬಳಿ ‘ಲವ್ ಯೂ ರಚ್ಚು’  ಶೂಟಿಂಗ್ ಗೆ ತೆರಳಿದ್ದ ವೇಳೆ ತಮಿಳುನಾಡು ಮೂಲದ ವಿವೇಕ್ ಮರಣ ಹೊಂದಿದ್ದಾರೆ.

ನಟ ಅಜಯ್ ರಾವ್ ಸಹ ಇದೇ ಶೂಟಿಂಗ್ ಸ್ಥಳದಲ್ಲಿ ಹಾಜರಿದ್ದು ಚಿತ್ರ ತಂಡ ಸರಿಯಾದ ಸುರಕ್ಷತಾ ಕ್ರಮ ತೆಗೆದುಕೊಂಡಿಲ್ಲ, ಹೈಟೆನ್ಷನ್ ವೈಯರ್ ಇದ್ದೆಡೆ ಫೈಟಿಂಗ್ ಆಯೋಜಿಸಿದ್ದು ತಪ್ಪಾಗಿದೆ ಎಂದಿದ್ದಾರೆ.

ಫೈಟರ್ ವಿವೇಕ್ ಸಾವನ್ನಪ್ಪುತ್ತಿದ್ದಂತೆ ಚಿತ್ರ ತಂಡ ಸ್ಥಳದಿಂದ ಪ್ಯಾಕ್ ಅಪ್ ಅಗಿದ್ದು ರಾಮನಗರದ ಡಿವೈಎಸ್ ಪಿ, ಸೇರಿದಂತೆ ಪೋಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.  ನಿರ್ದೇಶಕ, ಫೈಟರ್ ಸೇರಿದಂತೆ ಮೂವರನ್ನು ಅಂದರ್ ಮಾಡಿದ್ದಾರೆ.

ಆದರೇನಂತೆ ಮೃತ ಫೈಟರ್ ಅವರ ಕುಟುಂಬದವರಿಗೆ ಕ್ಯಾರೆ ಅನ್ನುವವರು ಯಾರೂ ಇಲ್ಲ.  ‘ ಬೇಡ, ಬೇಡ ಅಂದರೂ ಸಿನೆಮಾ ಶೂಟಿಂಗ್ ಇದೆ ಅಂತ ಮನೆಯಿಂದ ಬಂದ, ಇನ್ನೂ ಅವನ ಮುಖ ನೋಡಲು ಆಗಿಲ್ಲ, ಶೂಟಿಂಗ್ ನವರ್ಯಾರು ನಮಗೆ ಸಂಪರ್ಕಿಸಿಲ್ಲ’ ಎಂದು ಮಗನನ್ನು ಕಳೆದುಕೊಂಡ ಆ ತಾಯಿ ಮಾಧ್ಯಮದ ಎದುರು ಗೋಳು ತೋಡಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಮೃತರ ಕುಟುಂಬಕ್ಕೆ ಐವತ್ತು ಸಾವಿರ ನೀಡಿ ನೆರವಾಗಿದ್ದಾರೆ.   ಪ್ರಕರಣದ ಪ್ರಮುಖ ಆರೋಪಿ ನಿರ್ಮಾಪಕ ಗುರುದೇಶ್ ಪಾಂಡೆ ಹಾಗೂ ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡೀಸ್ ಪರಾರಿಯಾಗಿದ್ದು ಇವರ ಪತ್ತೆಗಾಗಿ ಪೋಲಿಸರು ಬಲೆ ಬೀಸಿದ್ದಾರೆ.

ಮತ್ತೊಬ್ಬ ಫೈಟರ್ ರಂಜಿತ್ ಸಹ ವಿದ್ಯುತ್ ತಂತಿ ತಗುಲಿದ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.  ರೈತ ಪುಟ್ಟರಾಮು ಜಮೀನನಲ್ಲಿ ಈ ದುರ್ಘಟನೆ ಜರುಗಿತ್ತು.