ಚಿಕ್ಕಮಗಳೂರು:  ಮೂಲಭೂತ ಸಮಸ್ಯೆಗಳನ್ನು ಬಿಟ್ಟು ಧರ್ಮ, ದೇವರು, ಹಿಂದುತ್ವ ಮತ್ತು ಜಾತಿ ಹೆಸರಿನಲ್ಲಿ ಮತ ಕೇಳುತ್ತಿರುವ ಬಿಜೆಪಿಯನ್ನು ಸೋಲಿಸುವಂತೆ ಅಂಬೇಡ್ಕರ್ ವೈಚಾರಿಕ ವೇದಿಕೆ ಕರೆ ನೀಡಿದೆ.

ಅಂಬೇಡ್ಕರ್ ವೈಚಾರಿಕ ವೇದಿಕೆಯ ಜಿಲ್ಲಾಧ್ಯಕ್ಷರಾದ ಕೂದುವಳಿ ಮಂಜು ಹಾಗೂ ಇತರೆ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದೇಶ ಸ್ವತಂತ್ರವಾಗಿ ೭೭ ವರ್ಷ ಕಳೆದರೂ ವಸತಿ, ನಿವೇಶನ, ಬಡತನ ನಿವಾರಣೆ ಹೆಸರಲ್ಲಿ ಮತ ಕೇಳುತ್ತಿರುವುದು ದುರಾದೃಷ್ಟ ಎಂದು ಹೇಳಿದರು.

ನೆರೆಹೊರೆಯ ರಾಷ್ಟ್ರಗಳಿಗಿಂತ ದೇಶದಲ್ಲಿ ಬಡತನ ಹೆಚ್ಚಾಗಿದೆ ಶ್ರೀಮಂತರ ಕೈಯಲ್ಲಿ ಬಹುಪಾಲು ಸಂಪತ್ತು ಶೇಖರಣೆಯಾಗಿದೆ. ಐಟಿ, ಇಡಿ ಭಯ ಹುಟ್ಟಿಸಿ ಚುನಾವಣೆ ಬಾಂಡ್ ಹೆಸರಿನಲ್ಲಿ ಭಾರಿ ಭ್ರಷ್ಟಾಚಾರದ ಮೂಲಕ ಬಿಜೆಪಿ ಪಕ್ಷಕ್ಕೆ ಹಣ ಸಂಗ್ರಹಿಸಿ ಸಂವಿಧಾನವನ್ನು ಬದಲಾಯಿಸುವುದಾಗಿ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿರುವ ಪ್ರಜಾಪ್ರಭುತ್ವದ ವಿರೋಧಿಯಾದ ಬಿಜೆಪಿಯನ್ನು ಈ ಚುನಾವಣೆಯಲ್ಲಿ ಸೋಲಿಸಬೇಕೆಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ ೬೦ ವರ್ಷದ ಆಳ್ವಿಕೆಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿದೆ ಆದರು ಮೂಲಭೂತ ಬದಲಾವಣೆ ಆಗಿಲ್ಲ. ಇದಕ್ಕೆ ಸಂಘಟಿತ ಹೋರಾಟ ನಡೆಸಬೇಕಾಗಿದ್ದು ಆಯಾ ಕ್ಷೇತ್ರಗಳಲ್ಲಿ ಜನರು ಹೆದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಸೋಲಿಸಿ ಕಾಂಗ್ರೆಸ್‌ನ್ನು ಪ್ರಶ್ನಿಸಿ ಮತ ನೀಡಿ ಪ್ರಜಾತಂತ್ರ ಉಳಿಸಿ ಎಂಬ ಘೋಷಣೆಯೊಂದಿಗೆ ತಮ್ಮ ವೇದಿಕೆ ಜನರಲ್ಲಿ ಮನವಿ ಮಾಡಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಪದಾಧಿಕಾರಿಗಳಾದ ನಾಗೇಶ್ ಇಂದಾವರ, ಮೋಹನ್ ಕುಮಾರ್, ಶುಭಾಷ್, ಹೊನ್ನಯ್ಯ , ಹುಲ್ಲೇಮನೆ ಸುರೇಶ್ ಇದ್ದರು.

Ambedkar’s ideological platform calls for defeating the BJP