ಚಿಕ್ಕಮಗಳೂರು: ಈಗಾಗಲೇ ೬ ಜಿಲ್ಲೆಯ ೨೨೦೦ ಶಾಲಾ-ಕಾಲೇಜುಗಳನ್ನು ಸಂಪರ್ಕಿಸಿದ್ದು ಶಿಕ್ಷಣ ಜಾತಿಯವನಾದ ನನ್ನನ್ನು ಬೆಂಬಲಿಸುವಂತೆ ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ಸ್ವತಂತ್ರ ಅಭ್ಯರ್ಥಿ ನಂಜೇಶ್ ಬೆಣ್ಣೂರು ಶಿಕ್ಷಕರಲ್ಲಿ ಮನವಿ ಮಾಡಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಯುವಶಕ್ತಿಗೆ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಘೋಷಿತ ವಿಧಾನ ಪರಿಷತ್ ಅಭ್ಯರ್ಥಿ ಕೆ.ಕೆ ಮಂಜುನಾಥ್ ಅವರು ತಮ್ಮ ಉಪಾಯವನ್ನು ನಮಗೆ ತಿರುಗು ಬಾಣ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಬೋಜೇಗೌಡರನ್ನು ಗೆಲ್ಲಿಸಲು ಬಂದಿರುವ ಅವರು ಕ್ಷೇತ್ರದ ಯಾವೊಬ್ಬ ಶಿಕ್ಷಕರನ್ನು ಭೇಟಿಯಾಗದೆ ನನಗೆ ಚುನಾವಣೆ ನಡೆಸುವುದು ಗೊತ್ತು ಎಂದು ಹೇಳಿಕೆ ನೀಡಿರುವುದು ಅವರ ದುರಹಂಕಾರವನ್ನು ತೋರಿಸುತ್ತದೆ ಎಂದು ಆರೋಪಿಸಿದರು.

ಇದಕ್ಕೆಲ್ಲ ಶಿಕ್ಷಕರು ಮುಂಬರುವ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸುತ್ತಾರೆ. ನಾನು ಈಗಾಗಲೇ ಆರು ಜಿಲ್ಲೆಗಳ ಶಿಕ್ಷಕರನ್ನು ಎರಡನೇ ಹಂತದಲ್ಲಿ ತಲುಪಿ ಮತಯಾಚನೆ ಮಾಡಿದ್ದು ಶಿಕ್ಷಕರ ಸಂಪೂರ್ಣ ಬೆಂಬಲ ನನಗೆ ವ್ಯಕ್ತವಾಗಿದೆ ಎಂದರು.

ಅನುದಾನಿತ ಶಾಲಾ ಕಾಲೇಜು ಶಿಕ್ಷಕರಿಗೆ ಕಳೆದ ಮಾರ್ಚ್ ೨೦೨೪ ವೇತನವನ್ನು ಸರ್ಕಾರ ಇನ್ನೂ ಮಂಜೂರು ಮಾಡುದಿರುವುದು ಶೋಚನೀಯ. ಸರ್ಕಾರಿ ಶಿಕ್ಷಕರಿಗೆ ಕೊಡುವ ಸವಲತ್ತುಗಳಿಂದ ಮೊದಲೇ ವಂಚಿತಗೊಂಡು ಬೇಸತ್ತು ಹೋಗಿರುವ ಅನುದಾನಿತ ಶಾಲಾ ಕಾಲೇಜು ಶಿಕ್ಷಕರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ ಎಂದು ಹೇಳಿದರು.

ಅನುದಾನಿತ ಶಾಲಾ ಕಾಲೇಜು ಶಿಕ್ಷಕರುಗಳು ಸರ್ಕಾರದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಸಮೀಕ್ಷೆಗಳ ಸಂಬಂದಿತ ಕಾರ್ಯದಲ್ಲಿ, ಮೌಲ್ಯಮಾಪನ ಕಾರ್ಯದಲ್ಲಿ, ಚುನಾವಣೆಗೆ ಸಂಬಂದಿತ ಕಾರ್ಯಗಳಲ್ಲಿ ಪ್ರಾಮಾಣಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಈ ವರ್ಗದ ಶಿಕ್ಷಕರ ಕುರಿತು ಸರ್ಕಾರಕ್ಕೆ ಎರಡು ಮನವಿಗಳನ್ನು ಮಾಡುತ್ತಿದ್ದೇನೆ. ಮೊದಲನೆಯದಾಗಿ ಸರಿಯಾದ ಸಮಯಕ್ಕೆ ಪ್ರತಿ ತಿಂಗಳು ಸಂಬಳವನ್ನು ನೀಡುವುದು ಹಾಗೂ ಸರ್ಕಾರಿ ಶಿಕ್ಷಕರಿಗೆ ಏನು ಸವಲತ್ತುಗಳು ಸಿಗುತ್ತಿದಿಯೋ ಅವುಗಳನ್ನು ಶಾಲಾ ಕಾಲೇಜು ಶಿಕ್ಷಕರಿಗೂ ಸಿಗುವಂತೆ ಮಾಡಲು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬೆಂಬಲಿಗ ಪವನ ಇದ್ದರು.

Give Youth Shakti a chance in South West Teachers Constituency Elections