ಚಿಕ್ಕಮಗಳೂರು: ಕಳೆದ ನಾಲ್ಕು ತಿಂಗಳಿಂದ ಬಾಕಿ ಇರುವ ವೇತನ ಕೂಡಲೇ ಬಿಡುಗಡೆ ಮಾಡಬೇಕೆಂದು ಸುವರ್ಣ ಕರ್ನಾಟಕ ಆರೋಗ್ಯ ಕವಚ (೧೦೮) ನೌಕರರ ಸಂಘ ಆಗ್ರಹಿಸಿದೆ.

ಈ ಸಂಬಂಧ ರಾಜ್ಯದ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಇನ್ನು ೧೦ ದಿನಗಳೊಳಗೆ ವೇತನ ಬಿಡುಗಡೆ ಮಾಡದೆ ಹೋದರೆ ಸೇವೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಯೋಗೀಶ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

೨೦೧೬ ರಿಂದ ೧೦೮ ಅಂಬುಲೆನ್ಸ್ ವಾಹನಗಳಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಅಪಘಾತ ಸಂದರ್ಭದಲ್ಲಿ ಜನರಿಗೆ ಸ್ಪಂಧಿಸಿದ್ದೇವೆ, ಅವರಿಗೆ ನೆರವಾಗಿದ್ದೇವೆ. ಆದರೆ, ಇಂದು ನಮ್ಮ ಭವಿಷ್ಯ ಕಷ್ಟದಲ್ಲಿದೆ. ನಮಗೆ ಹಿಂದಿನ ವರ್ಷ ತಿಂಗಳಿಗೆ ೩೭ ಸಾವಿರ ರುಪಾಯಿ ಸಂಬಳ ನೀಡುತ್ತಿದ್ದರು. ಕಳೆದ ವರ್ಷ ೩೧ ಸಾವಿರಕ್ಕೆ ಇಳಿಸಿದ್ದಾರೆ. ಈಗ ಮತ್ತೆ ಕಡಿತಗೊಳಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದರು.

ನಾವುಗಳು ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳು ವೇತನ ಹೆಚ್ಚಳ ಮಾಡುತ್ತವೆ. ಆದರೆ, ಸುಮಾರು ೪ ಸಾವಿರ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿರುವ ನಮ್ಮಗಳ ವೇತನ ಕಡಿತಗೊಳಿಸಲಾಗುತ್ತಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸುವರ್ಣ ಕರ್ನಾಟಕ ಆರೋಗ್ಯ ಕವಚ (೧೦೮) ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಉಮೇಶ್, ಜಂಟಿ ಕಾರ್ಯದರ್ಶಿ ಗುರುಮೂರ್ತಿ, ಜಿಲ್ಲಾಧ್ಯಕ್ಷ ಪಿ.ಬಿ. ಸತೀಶ್, ಗಿರೀಶ್, ಅನಂತ ಪೈ ಉಪಸ್ಥಿತರಿದ್ದರು.

Arogya Kavka (108) Employees union demand release of outstanding wages