ಮಂಗಳೂರು: ನಗರದ ಪಂಪ್‌ವೆಲ್ ವೃತ್ತದ ಬಳಿ ಶನಿವಾರ ಸಂಜೆ ಕುಕ್ಕರ್ ಬಾಂಬ್ ಸ್ಫೋಟಗೊಂಡಿರುವ ಘಟನೆ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಮಾಹಿತಿಗಳು ಬಯಲಾಗುತ್ತಲೇ ಇವೆ. ಈಗ ಬಾಂಬ್ ಬೇರೆಲ್ಲೋ ಸ್ಫೋಟವಾಗಬೇಕಿದ್ದ ಬಾಂಬ್ ಹಂಪ್ಸ್‌ನಿಂದಾಗಿ ಆಟೋ ರಿಕ್ಷಾದಲ್ಲಿ ಸ್ಫೋಟವಾಗಿರಬಹುದು ಎಂಬ ಶಂಕೆ ಎದ್ದಿದೆ.

ಕುಕ್ಕರ್ ಬ್ಲಾಸ್ಟ್ ಆಗಿರುವ ಸ್ಥಳದ ಬಳಿ ದಾರಿಯಲ್ಲಿ ಹಂಪ್ಸ್ ಇದ್ದಿದ್ದು, ಆ ಹಂಪ್ಸ್‌ನಲ್ಲಿ ಆಟೋವನ್ನು ಹತ್ತಿಸಿದ್ದರಿಂದ ಕುಕ್ಕರ್ ಬಾಂಬ್ ಸ್ಫೋಟಗೊಂಡಿರಬಹುದು ಎಂಬ ಅನುಮಾನ ಎದ್ದಿದೆ. ಶನಿವಾರ ಸಂಜೆ ಮಂಗಳೂರಿನ ಪಂಪ್‌ವೆಲ್‌ನಿಂದ ನಾಗುರಿ ಕಡೆ ಚಲಿಸುತ್ತಿದ್ದ ಆಟೋದಲ್ಲಿ ಸ್ಫೋಟ ಸಂಭವಿಸಿದೆ. ಇದಕ್ಕೂ ಮುನ್ನ ದಾರಿ ಮಧ್ಯೆ ಪ್ರಯಾಣಿಕನೊಬ್ಬ ಕೈಯಲ್ಲಿ ಕುಕ್ಕರ್ ಹಿಡಿದುಕೊಂಡು ಆಟೋ ಹತ್ತಿದ್ದ.

ಆತ ನಾಗುರಿಗೆ ಹೋಗಲು ಚಾಲಕನಿಗೆ ಸೂಚಿಸಿದ್ದ. ಆದರೆ ಕೆಲವೇ ಕ್ಷಣಗಳಲ್ಲಿ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆಯ ಎದುರು ಆಟೋದ ಒಳಗೆ ಕುಕ್ಕರ್ ಬಾಂಬ್ ಸ್ಫೋಟಗೊಂಡಿದೆ. ಶಂಕಿತನ ಕೈಯಲ್ಲಿದ್ದ ಕುಕ್ಕರ್ ಛಿದ್ರಗೊಂಡಿದೆ.

ಕುಕ್ಕರ್ ಬಾಂಬ್ ಅನ್ನು ಜನಜಂಗುಳಿಯಿದ್ದ ಪ್ರದೇಶದಲ್ಲಿ ಟೈಮರ್ ಇಟ್ಟು ಸ್ಫೋಟಿಸುವ ಹುನ್ನಾರವನ್ನು ಮಾಡಲಾಗಿದೆ. ಮಾತ್ರವಲ್ಲದೇ ನಿನ್ನೆ ರಾಜ್ಯದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳೂರಿಗೆ ಭೇಟಿ ನೀಡಿದ್ದ ಬೆನ್ನಲ್ಲೇ ಸ್ಫೋಟ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.

Cooker bomb explodes in auto due to humps