ರಾಜ್ಯದಲ್ಲಿ ಶಾಲೆಗಳಿಗೆ ಮಧ್ಯಂತರ (ದಸರಾ) ರಜೆಯನ್ನು ಅಕ್ಟೋಬರ್‌ 31 ರವರೆಗೆ ವಿಸ್ತರಣೆ ಮಾಡುವಂತೆ ಒತ್ತಡ ಕೇಳಿಬಂದಿದೆ. ಈ ಕುರಿತು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಗ್ರಹಿಸಿದೆ.

ಕರ್ನಾಟಕ ರಾಜ್ಯದಲ್ಲಿ ಮಧ್ಯಂತರ ದಸರಾ ರಜೆಯನ್ನು ಅಕ್ಟೋಬರ್‌ 3ರಿಂದ ಅಕ್ಟೋಬರ್‌ 17 ರ ವರೆಗೆ ನಿಗದಿಪಡಿಸಲಾಗಿದ್ದು, ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ರಜೆಯನ್ನು ನೀಡಲಾಗಿದೆ. ನಿಜವಾಗಿಯೂ ಮಕ್ಕಳಿಗೆ ಹಾಗೂ ಶೈಕ್ಷಣಿಕ ವ್ಯವಸ್ಥೆಯಲ್ಲಿ ವ್ಯತ್ಯಾಸ ಉಟಾಗುತ್ತಿದೆ.

ಅದ್ರಲ್ಲೂ ಪ್ರತೀ ವರ್ಷಕ್ಕಿಂತ ಈ ಬಾರಿ ಹದಿನೈದು ದಿನ ಮುಂಚಿತವಾಗಿ ಶಾಲೆಗಳನ್ನು ಆರಂಭಿಸಲಾಗಿದೆ. ಅಲ್ಲದೇ ಮಧ್ಯಂತರ ರಜೆ ಅವಧಿಯಲ್ಲಿ ಕಡಿತಗೊಳಿಸಲಾಗಿದೆ ಇದು ರಾಜ್ಯದ ಮಕ್ಕಳಿಗೆ ನಿರಾಸೆ ಉಂಟಾಗಿದೆ. ಹೀಗಾಗಿ ಬೇಸಿಗೆ ರಜೆಯನ್ನು ಈ ಬಾರಿ ಅಕ್ಟೋಬರ್‌ 3 ರಿಂದ ಅಕ್ಟೋಬರ್‌ 31 ರ ವರೆಗೆ ವಿಸ್ತರಣೆ ಮಾಡುವಂತೆ ಮನವಿಯಲ್ಲಿ ತಿಳಿಸಲಾಗಿದೆ.

ಮಧ್ಯಂತರ ದಸರಾ ರಜೆ ಹಾಗೂ ಬೇಸಿಗೆ ರಜೆಯನ್ನು ನೀಡಲು ಅದರದೇ ಆದ ವೈಜ್ಞಾನಿಕ ಕಾರಣಗಳಿವೆ. ಮಕ್ಕಳ ಶೈಕ್ಷಣಿಕ ಹಾಗೂ ಭೌತಿಕ ಹಿತದೃಷ್ಟಿಯಿಂದ ರಜಾ ದಿನಗಳನ್ನು ಒಟ್ಟು ನಿರ್ವಹಿಸಬೇಕಾದ ಶಾಲಾ ದಿನಗಳನ್ನು ಕೂಡ ವೈಜ್ಞಾನಿಕವಾಗಿ ನಿರ್ಧರಿಸಲಾಗುತ್ತದೆ.

ಈ ಎಲ್ಲಾ ಅಂಶಗಳ ಜೊತೆಗೆ ಕೋವಿಡ್‌ ಕಾರಣಗಳಿಂದಾಗಿ ಈ ವರ್ಷ ಶಾಲೆಗಳಲ್ಲಿ ಮಕ್ಕಳ ಕಲಿಕಾ ಕಂದಕಗಳನ್ನು ಕಡಿಮೆಗೊಳಿಸುವ ಸಲುವಾಗಿ 15 ದಿನಗಳ ಮುಂಚಿತವಾಗಿ ಮೇ 15 ರಿಂದಲೇ ಶಾಲೆಗಳನ್ನು ಆರಂಭಿಸಿ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿತ್ತು. ಹೀಗಾಗಿ ಮಕ್ಕಳಿಗೆ ಶಿಕ್ಷಣ ಹೊರೆಯಾಗದಂತೆ ನೋಡಿಕೊಳ್ಳಲು ದಸರಾ ರಜೆ ವಿಸ್ತರಣೆ ಅನಿವಾರ್ಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕಲಿಕಾ ಚೇತರಿಕೆಯ ಹೆಸರಲ್ಲಿ ಈ ಬಾರಿ ಹದಿನೈದು ದಿನ ಮುಂಚಿತವಾಗಿ ಶಾಲಾರಂಭ ಮಾಡಿರುವುದು ಮಕ್ಕಳ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಿದೆ. ಹಿಂದೆಲ್ಲಾ ಬೇಸಿಗೆ ರಜೆಯನ್ನು ಎರಡು ತಿಂಗಳು, ದಸರಾ ರಜೆಯನ್ನು ಸರಾಸರಿ ಒಂದು ತಿಂಗಳ ಕಾಲ ನೀಡಲಾಗುತ್ತಿತ್ತು. ಆದ್ರೆ ವರ್ಷಗಳು ಕಳೆದಂತೆ ರಜೆಯ ಅವಧಿಯನ್ನು ಕಡಿತ ಮಾಡಲಾಗುತ್ತಿದೆ.

ಈ ಬಾರಿ ಬೇಸಿಗೆ ರಜೆಯಲ್ಲಿ ಹದಿನೈದು ದಿನ ಕಡಿತ ಮಾಡಲಾಗಿದ್ದು, ಇದೀಗ ದಸರಾ ರಜೆಯಲ್ಲಿ ಕಡಿತ ಮಾಡಿರೋದು ಮಕ್ಕಳನ್ನು ಹಾಗೂ ಶಿಕ್ಷಕರನ್ನು ಒತ್ತಡಕ್ಕೆ ಸಿಲುಕಿಸಿದಂತಾಗಿದೆ. ಇದು ಮಕ್ಕಳ ಆರೋಗ್ಯದ ಮೇಲೆಯೂ ಗಂಭೀರವಾದ ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಸರಕಾರ, ಶಿಕ್ಷಣ ಇಲಾಖೆ ಈ ಕುರಿತು ಗಂಭೀರವಾದ ಚಿಂತನೆ ನಡೆಸಬೇಕಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.