ಚಿಕ್ಕಮಗಳೂರು: ಮಂಗಳೂರಿನ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಿಂದ ರಾಜ್ಯಾದ್ಯಂತ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸುತ್ತಿದ್ದು ಆಸಕ್ತರಿಗೆ ಉಚಿತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಮೋಣು ಹೇಳಿದರು.

ನಗರದ ಎಂಇಎಸ್ ಕಾಲೇಜಿನ ಆವರಣದಲ್ಲಿ ನ್ಯಾಷನಲ್ ವೆಲ್ಫೇರ್ ಮತ್ತು ಚಾರಿಟೆಬಲ್ ಟ್ರಸ್ಟ್ ಮತ್ತು ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳೂರಿನ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಿಂದ ಬೆಂಗಳೂರು, ಮೈಸೂರು ಬಿಟ್ಟು ಉಳಿದ ಎಲ್ಲ ಜಿಲ್ಲೆಯಲ್ಲೂ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿದ್ದೇವೆ. ಬಡವರು, ಆಸಕ್ತರು ಆಸ್ಪತ್ರೆಗೆ ಬಂದಲ್ಲಿ ಅವರಿಗೆ ಉಚಿತ ಚಿಕಿತ್ಸೆ, ಉಚಿತ ಬೆಡ್, ಊಟ ವಸತಿ ನೀಡಲಾಗುವುದು. ಔಷದ ವೆಚ್ಚ ಮಾತ್ರ ಅವರು ಭರಿಸಬೇಕಾಗುತ್ತದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ಶಫಿಉಲ್ಲಾ ಮಾತನಾಡಿ, ಚಿಕ್ಕಮಗಳೂರಿನಲ್ಲಿ ಇದು ೭ ನೇ ಉಚಿತ ಆರೋಗ್ಯ ಶಿಬಿರ. ಶಿಬಿರದಲ್ಲಿ ಗಂಭೀರ ಕಾಯಿಲೆ ಮತ್ತು ಶಸ್ತ್ರ ಚಿಕಿತ್ಸೆ ಅಗತ್ಯವಿದ್ದಲ್ಲಿ ಮಂಗಳೂರಿನ ಕಣಚೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಬಡವರು ಬಂದು ನಮ್ಮಲ್ಲಿ ಹಣ ಇಲ್ಲ ಎಂದರೆ ಚಿಕಿತ್ಸೆ ನೀಡುತ್ತೇವೆ. ಸರಕಾರದ ವಿವಿಧ ವಿಮಾ ಯೋಜನೆಗಳ ಮೂಲಕ ನೆರವು ಒದಗಿಸಲಾಗುವುದು ಎಂದರು.

ಮಕ್ಕಳ ತಜ್ಞ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಕಣಚೂರು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವಿಶೇಷವಾದದು. ಇವರು ರಚಿಸಿಕೊಂಡಿರುವ ಟ್ರಸ್ಟ್ ಮೂಲಕ ಅಧ್ಯಕ್ಷ ಡಾ.ಮೋಣು ಅವರು ಸಹಸ್ರಾರು ಬಡವರಿಗೆ ಉಚಿತ ಸೌಲಭ್ಯ ನೀಡಿದ್ದಾರೆ ಎಂದರು.

ನ್ಯಾಷನಲ್ ವೆಲ್ಫೇರ್ ಮತ್ತು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ರಿಯಾಜ್ ಖಾನ್ ಮಾತನಾಡಿ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ವೈದ್ಯಕೀಯ ಶಾಸ್ತ್ರ ತಜ್ಞರು, ಕ್ಷಯ ಮತ್ತು ಶ್ವಾಸಕೋಶ ತಜ್ಞರು, ಮಕ್ಕಳ ತಜ್ಞರು, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು, ಮೂಳೆ ತಜ್ಞರು, ಶಸ್ತ್ರಚಿಕಿತ್ಸಾ ತಜ್ಞರು, ಚರ್ಮರೋಗ ತಜ್ಞರು, ಕಿವಿಮೂಗು ಮತ್ತು ಗಂಟಲು ತಜ್ಞರ ತಂಡ ಒಳಗೊಂಡಿರುವುದರ ಜೊತೆಗೆ ಉಚಿತವಾಗಿ ಔಷದಿಗಳನ್ನು ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯಿತ್ರಿಶಾಂತೇಗೌಡ, ಮಾಜಿ ಸಚಿವಸಗೀರ್‌ಅಹ್ಮದ್, ಕಾಂಗ್ರೆಸ್ ಮುಖಂಡ ಎಚ್.ಎಚ್.ದೇವರಾಜ್,ಬಿಎಸ್ಪಿ ಕೆ.ಟಿ.ರಾಧಕೃಷ್ಣ, ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ, ಸಿಡಿಎ ಮಾಜಿ ಅಧ್ಯಕ್ಷ ಅತೀಕ್ ಖೈಸರ್, ಉಪಾಧ್ಯಕ್ಷರಾದ ಸೈಯದ್ ಗೌಸ್ ಮೋಹಿದ್ದೀನ್ ಶಾ, ನಿರ್ದೇಶಕರಾದ ಅಕ್ಮಲ್, ಇಕ್ಬಾದ್ ಅಹಮದ್, ಅನ್ವರ್, ರಫೀಕ್ ಅಹಮದ್, ಅಸ್ಲಾಮ್, ಪರ್ವೀಜ್, ಜಿಯಾ, ಪೈರಜ್ ಅಹಮದ್, ಮತ್ತಿತರರಿದ್ದರು.

Free health checkup camp