ಚಿಕ್ಕಮಗಳೂರು : ನಿರಂತರ ರೈತಪರವಾದ ಹೋರಾಟ, ನೇರ, ದಿಟ್ಟ ಮಾತುಗಳಿಂದಲೇ ಜನಮನ್ನಣೆ ಗಳಿಸಿ ಜೆಡಿಎಸ್ ಪಕ್ಷದಲ್ಲಿ ಗಟ್ಟಿಯಾಗಿ ನೆಲೆನಿಂತಿದ್ದ  ರಾಜ್ಯ ಘಟಕದ ಉಪಾಧ್ಯಕ್ಷರು ಆಗಿರುವ ಹೆಚ್.ಹೆಚ್.ದೇವರಾಜ್ ಅವರು ಜೆಡಿಎಸ್ ಪಕ್ಷ ತೊರೆಯಲಿದ್ದಾರೆ ಎಂಬ ಗುಮಾನಿ  ಕೇಳಿಬರುತ್ತಿದೆ.

ರಾಜ್ಯಮಟ್ಟದ ನಾಯರೊಬ್ಬರು ಪಕ್ಷದ ಮುಖಂಡರ ನಡವಳಿವಳಿಕೆಯಿಂದ ಬೇಸರಗೊಂಡು ಜೆಡಿಎಸ್ ತೊರೆಯಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.  ಮಂಡಲ ಪಂಚಾಯಿತಿಯಿಂದ, ಜಿಲ್ಲಾ ಪಂಚಾಯಿತಿಯವರೆಗೆ ಆಯ್ಕೆಯಾಗಿರುವ ಇವರು ಜಾತ್ಯಾತೀತ ಮನೋಭಾವನೆ ಮೂಲಕ ಜನಪರ ಕಾರ್ಯಗಳಲ್ಲಿ ತೊಡಗುತ್ತಿದ್ದರು, ಇದೀಗ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳಲು ವೇದಿಕೆ ಸಿದ್ದಪಡಿಸಿಕೊಳ್ಳುತ್ತಿದ್ದಶರೆ ಎಂದು ತಿಳಿದುಬಂದಿದೆ.

ಮೊದಲ ಬಾರಿ ಬ್ಯಾರುವಳ್ಳಿ ಪಂಚಾಯಿತಿ ಮಂಡಲ ಪ್ರಧಾನರಾಗುವ ಮೂಲಕ ರಾಜಕೀಯ ಪ್ರವೇಶಿಸಿದ್ದರು. ಬಳಿಕ ಗ್ರಾಮೀಣ ಹೋರಾಟ ಸಮಿತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಜಿಲ್ಲಾ ಪಂಚಾಯಿತಿ ವಸ್ತಾರೆ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಜಿಲ್ಲಾ ಪಂಚಾಯಿತಿ ಪ್ರವೇಶಿಸಿದ್ದರು.  ಎಲ್ಲಾ ಸಭೆಗಳಲ್ಲಿ ಜನರ ಸಮಸ್ಯೆಗಳ ಕುರಿತು ಗಟ್ಟಿಯಾಗಿ ಧನಿ ಎತ್ತುವ ಮೂಲಕ ಬಗೆಹರಿಸುವಲ್ಲಿ ಮುಂದಾಗುತ್ತಿದ್ದರು., ಜಿಲ್ಲಾ ಪಂಚಾಯಿತಿಯಲ್ಲಿ ನಡೆದಿದ್ದ ಸಿಮೆಂಟ್ ಹಗರಣವನ್ನು ಬಯಲಿಗೆಳೆಯುವ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಜಿಲ್ಲಾ ನಾಯಕರಾಗಿ ಗುರುತಿಸಿಕೊಂಡಿದ್ದರು.

ರಾಮಕೃಷ್ಣ ಹೆಗಡೆಯವರು ಜನತಾ ಪಕ್ಷದಿಂದ ಉಚ್ಚಾಟನೆಯಾದಾಗ ಆ ಪಕ್ಷದಿಂದ ಅವರು ಹೊರಬಂದು ಲೋಕಶಕ್ತಿ ಪಕ್ಷ ಕಟ್ಟಿದರು, ಆಗ ಆ ಪಕ್ಷದಿಂದ ಹೆಚ್.ಹೆಚ್.ದೇವರಾಜ್ ಸ್ಪರ್ಧಿಸಿದ್ದರು. ಜಿಲ್ಲೆಯಲ್ಲಿನ ಅನೇಕ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಸೆಳೆಯುವ ಮೂಲಕ ಜೆಡಿಎಸ್ ರಾಜ್ಯ ನಾಯಕರ ಗಮನ ಸೆಳೆಸಿದ್ದರು, ಜಿಲ್ಲೆಯಲ್ಲಿ ಅತಿವೃಷ್ಟಿ, ಪ್ರಾಕೃತಿಕ ವಿಕೋಪ, ಬೆಳೆಹಾನಿ ಸೇರಿದಂತೆ ಹಲವು ಸಮಸ್ಯೆಗಳ ವಿರುದ್ದವಾಗಿ ಹೋರಾಡಿ ಪರಿಹಾರ ದೊರಕಿಸಿಕೊಡಲು ಮುಂಚೂಣಿಯಾಗಿ ನಿಂತು ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸುತ್ತಾ ಬಂದಿದ್ದಾರೆ.

ಕಳೆದ ಎಂ.ಎಲ್.ಎ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವ ಇಂಗಿತ ಹೊಂದಿದ್ದರು, ಪಕ್ಷ ಬಿ.ಹೆಚ್.ಹರೀಶ್ ಅವರನ್ನು ಕರೆತಂದು ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಮಾಡಿತ್ತು ಆಗಲೂ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಆದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ  ಎಂ.ಎಲ್.ಎ ಸ್ಪರ್ಧೆಗೆ ಟಿಕೆಟ್ ನೀಡುವಂತೆ ಮುಖಂಡರ ಸಮ್ಮುಖದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದಾಗ ಮುಂದಿನ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ತಿಮ್ಮಶೆಟ್ಟಿ ಅವರನ್ನು ಕಣಕ್ಕಿಳಿಸಲು ಪಕ್ಷದ ಮುಖಂಡರು ನಿರ್ಧರಿಸಿದ್ದು ದೇವರಾಜ್ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.  ಈಗಾಗಲೇ ಕಾಂಗ್ರೆಸ್ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಯುತ್ತಿದೆ ಎಂಬುದು ತಿಳಿದಿದ್ದು ಮುಂದಿನ ದಿನಗಳಲ್ಲಿ ತಮ್ಮ ಬೆಂಬಲಿಗರೊಂದಿಗೆ ಚರ್ಚಿಸಿ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎಂಬುದು ಅನೇಕ ಬೆಂಬಲಿಗರ ಮಾತು.