ಚಿಕ್ಕಮಗಳೂರು: ರಾಜ್ಯದ ಸ್ಥಳೀಯ ಸಂಸ್ಥೆಗಳಾದ ನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ವೇತನ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹ ಮೂರ್ತಿ ಮಾತನಾಡಿ ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ತ್ಯಾಜ್ಯ ಸಾಗಿಸುವ ವಾಹನ ಚಾಲಕರು, ವಾಟರ್‌ಮೆನ್, ಡೇಟಾ ಆಪರೇಟರ್, ಯುಜಿಡಿ ಕಾರ್ಮಿಕರು ಹಾಗೂ ಸಹಾಯಕರನ್ನು ಗುತ್ತಿಗೆ ಪದ್ದತಿ ಬದಲು ನೇರವೇತನಕ್ಕೆ ಒಳಪಡಿಸಬೇಕು, ಕೋವಿಡ್ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ಸಕಾಲಕ್ಕೆ ಕನಿಷ್ಟ ವೇತನ ನೀಡದೆ ಗುತ್ತಿಗೆ ಹೆಸರಲ್ಲಿ ಶೋಷಣೆ ಅನುಭವಿಸುತ್ತಿದ್ದು ಇದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು.
೨೦೧೭ ರಲ್ಲಿ ಪೌರಕಾರ್ಮಿಕರನ್ನು ವಿಶೇಷ ನೇಮಕಾತಿ ಅಡಿಯಲ್ಲಿ ಖಾಯಂಗೊಳಿಸಿದ್ದ ಸರ್ಕಾರ. ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ವೇತನ ನೀಡಿಲ್ಲ. ಜತೆಗೆ ಭವಿಷ್ಯ ನಿಧಿಯ ಹಣವನ್ನು ನೀಡದೆ ಎಜೆನ್ಸಿಗಳು ವಂಚಿಸಿವೆ. ಇಂತಹ ದೌರ್ಜನ್ಯಗಳನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರನ್ನು ನೇರ ವೇತನಕ್ಕೆ ಒಳಪಡಿಸಬೇಕು, ಪೌರಾಡಳಿತ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಅಗತ್ಯಕ್ಕೆ ಅನುಗುಣವಾಗಿ ಪರಿಷ್ಕರಿಸಬೇಕು, ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ವಜಾಗೊಳಿಸುವ ಸಕಾಲಕ್ಕೆ ವೇತನ ನೀಡದೆ ಕಿರುಕುಳ ನೀಡುವ ಪ್ರವೃತ್ತಿ ನಿಲ್ಲಬೇಕು, ದಾವಣಗೆರೆ ಸೇರಿದಂತೆ ರಾಜ್ಯದಲ್ಲಿ ಸಕಾರಣವಿಲ್ಲದೇ ಕೆಲಸದಿಂದ ತೆಗೆದುಹಾಕಿದ ಸಿಬ್ಬಂದಿಗಳನ್ನು ಮರುನಿಯೋಜಿಸಬೇಕು, ಎಂದು ಪತ್ರದ ಮುಖೇನ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಹೊರಗುತ್ತಿಗೆ ನೌಕರರ ಸಂಘದ ಸದಸ್ಯರಾದ ಗಂಗಾಧರ್, ತಾಲ್ಲೂಕು ಅಧ್ಯಕ್ಷರಾದ ವೆಂಕಟೇಶ್, ಶಿವಪ್ಪ, ಸುನೀಲ್ ಸೇರಿದಂತೆ ಮತ್ತಿತರರು ಇದ್ದರು.

ಪೌರಕಾರ್ಮಿಕರ ಸರ್ವತೋಮುಖ ಅಭಿವೃದ್ಧಿ ನಿಟ್ಟಿನಲ್ಲಿ ಅಗತ್ಯ ಕ್ರಮ : ಡಿಸಿ ರಮೇಶ್