ಚಿಕ್ಕಮಗಳೂರು: ಕನ್ನಡದಲ್ಲಿ ಮಾತನಾಡುವುದೇ ಕೀಳರಿಮೆ ಎಂಬ ಭಾವನೆ ಮತ್ತು ಧೋರಣೆ ಬಹುತೇಕ ಇಂಗ್ಲೀಷ್ ಶಾಲೆಗಳಲ್ಲಿ ಕಂಡು ಬರುತ್ತಿರುವುದು ಸಾಮಾನ್ಯ ಸಂಗತಿ.  ಇದಕ್ಕೆ ಅಪವಾದವೆಂಬಂತೆ ನಗರದ ಕುವೆಂಪು ವಿದ್ಯಾನಿಕೇತನ ಐಸಿಎಸ್‌ಇ ಶಾಲೆ ಶನಿವಾರ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ಉಳಿದ ಇಂಗ್ಲೀಷ್ ಶಾಲೆಗಳಿಗೆ ಮಾದರಿಯಾಯಿತು.

ರಾಜ್ಯೋತ್ಸವದ ಅಂಗವಾಗಿ ಬೆಳಿಗ್ಗೆ ಶಾಲೆಯ ಆವರಣದಲ್ಲಿ ಕನ್ನಡ ಭುವನೇಶ್ವರಿಯ ಮೆರವಣಿಗೆ ನಡೆಯಿತು. ವಿದ್ಯಾರ್ಥಿಗಳು ಶಾಲೆಯ ಸಮವಸ್ತçವನ್ನು ಬದಿಗಿಟ್ಟು ವಿವಿಧ ವೇಷಭೂಷಣಗಳನ್ನು ಧರಿಸಿ ಕನ್ನಡ ಪರ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ನಾಡಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವೇಳೆ ವಿದ್ಯಾರ್ಥಿಗಳಿಂದ ನಾಡಗೀತೆ ಗಾಯನ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂಗ್ಲೀಷ್ ಶಾಲೆಯಲ್ಲಿ ಕನ್ನಡದ ಡಿಂಡಿಮ ಮೊಳಗಿರುವುದು ರಾಜ್ಯೋತ್ಸವ ಆಚರಿಸಿರುವುದು ಶುಭ ಸಂಕೇತವಾಗಿದ್ದು ಇದನ್ನು ಎಲ್ಲಾ ಆಂಗ್ಲ ಮಾಧ್ಯಮ ಶಾಲೆಗಳೂ ಅನುಸರಿಸಬೇಕು ಎಂದು ಸಲಹೆ ಮಾಡಿದರು.

ರಾಜ್ಯದಲ್ಲಿ ಕನ್ನಡ ಭಾಷೆ ಉಳಿದರೆ ಮಾತ್ರ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರ ಉಳಿಯುತ್ತದೆ ಎಂದ ಅವರು ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಲ್ಲ ನಾನೊಬ್ಬ ನುಡಿ ಸೇವಕನಾಗಿದ್ದು ದಯಮಾಡಿ ಎಲ್ಲರೂ ನನ್ನನ್ನು ನುಡಿಸೇವಕನೆಂದೇ ಕರೆಯಬೇಕು ಎಂದು ಮನವಿ ಮಾಡಿದರು.

ಲೇಖಕಿ ವಾಣಿ ಚಂದ್ರಯ್ಯನಾಯ್ಡು ಮಾತನಾಡಿ ವ್ಯವಹಾರಕ್ಕಾಗಿ ಇಂಗ್ಲೀಷ್ ಸೇರಿದಂತೆ ಯಾವುದೇ ಭಾಷೆಯನ್ನು ಬೇಕಾದರೂ ಕಲಿಯಿರಿ ಆದರೆ ಮಾತೃಭಾಷೆಯಲ್ಲೇ ಮಾತನಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶಾಲೆಯ ಕಾರ್ಯದರ್ಶಿ ಕೆ.ಸಿ.ಶಂಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಮನುಷ್ಯರ ಎಲ್ಲಾ ಸಾಧನೆ ಮತ್ತು ಪ್ರಗತಿಗೆ ಮಾತೃಭಾಷೆಯ ಭದ್ರ ಬುನಾದಿ ಅತ್ಯಗತ್ಯ ಅದಿಲ್ಲದಿದ್ದರೆ ಯಾವ ವ್ಯಕ್ತಿಯೂ ಬೆಳೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸೂರಿ ಶ್ರೀನಿವಾಸ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾಜ್ಯೋತ್ಸವದ ಪ್ರಯುಕ್ತ ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು, ಆವರಣದೆಲ್ಲೆಡೆ ಕನ್ನಡ ಧ್ವಜ ರಾರಾಜಿಸಿತು, ಸ್ವಾಗತ ನಿರೂಪಣೆ ಮತ್ತು ವಂದನೆಯನ್ನು ವಿದ್ಯಾರ್ಥಿಗಳು ಕನ್ನಡದಲ್ಲೇ ಮಾಡುವ ಮೂಲಕ ಗಮನ ಸೆಳೆದರು. ಶಾಲೆಯ ಪ್ರಾಂಶುಪಾಲ ರಾಘವೇಂದ್ರ, ಮಂಗಳೂರು ನಗರಪಾಲಿಕೆ ಇಂಜಿನಿಯರ್ ಭಾಸ್ಕರ್, ಪೃಥ್ವಿ ಸೂರಿ ಉಪಸ್ಥಿತರಿದ್ದರು.

ರಾಜ್ಯೋತ್ಸವಕ್ಕೆ ವಿಶಿಷ್ಟ ಯೋಜನೆ: ಮನೆ-ಮನಗಳಿಗೆ ಕನ್ನಡದ ಕಂಪು ಪಸರಿಸಲು ಸರ್ಕಾರದ ಸಿದ್ಧತೆ